ಶ್ವಾಸಕೋಶವಿಲ್ಲದ ಕಪ್ಪೆಯೊಂದನ್ನು ಇಂಡೊನೇಷಿಯಾದಲ್ಲಿ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಶ್ವಾಸಕೋಶವಿಲ್ಲದ ಜಲಚರ ಕಪ್ಪೆಯು 30 ವರ್ಷಗಳ ನಂತರ ಪತ್ತೆಯಾಗಿದೆ.
ಇಂಡೊನೇಷಿಯಾದ ಕಾಲಿಮಂತನ್ ಪ್ರದೇಶದಲ್ಲಿ ಸಂಶೋಧಕರು ಜೀವ ವೈವಿದ್ಯತೆಯ ಕುರಿತು ಕೈಗೊಂಡ ಸಂದರ್ಭದಲ್ಲಿ ಈ ಜಲಚರ ವಾಸಿ ಪತ್ತೆಯಾಗಿದ್ದು, ಚಪ್ಪಟೆಯಾದ ತಲೆಯನ್ನು ಹೊಂದಿದೆ ಎಂದು ವಿಜ್ಞಾನಿಗಳು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಕಳೆದ ಮೂವತ್ತು ವರ್ಷಗಳಿಂದ ಈ ತೆರನಾದ ಕಪ್ಪೆ ಅಸ್ತಿತ್ವದಲ್ಲಿ ಇತ್ತು ಎಂದು ಸಂಶಯವನ್ನು ಜನರು ವ್ಯಕ್ತಪಡಿಸಿದ್ದರು. ಪ್ರಾರಂಭಿಕ ಸಂಶೋಧನೆ ಮತ್ತು ಕಪ್ಪೆಯ ದೇಹದ ಪರೀಕ್ಷೆಯ ನಂತರ ಈ ಕಪ್ಪೆಗೆ ಶ್ವಾಸಕೋಶ ಇಲ್ಲದಿರುವುದು ದೃಢಪಟ್ಟಿತು. ಪ್ರಾರಂಭದಲ್ಲಿ ನಾವು ನಂಬುವ ಸ್ಥಿತಿಯಲ್ಲಿ ಇರಲಿಲ್ಲ ಎಂದು ಸಿಂಗಪೂರ್‌ದ ನ್ಯಾಷನಲ್ ಯುನಿವರ್ಸಿಟಿಯ ಪ್ರಾದ್ಯಾಪಕ ಡೆವಿಡ್ ಬಿಕ್‌ಫೋರ್ಡ್ ಹೇಳಿದ್ದಾರೆ.
ಕಾಲಿಮಂತನ್ ಪ್ರದೇಶದಲ್ಲಿ ದೊರೆತ ಕಪ್ಪೆಯನ್ನು ಪರೀಕ್ಷಿಸಿದ ನಂತರ ಅದಕ್ಕೆ ಶ್ವಾಸಕೋಶವೇ ಇಲ್ಲ ಎನ್ನುವುದು ಖಚಿತಗೊಂಡ ನಂತರ ನಮಗೆ ಅಚ್ಚರಿಯಾಗಿದೆ ಎಂದು ಅವರು ಏಪ್ರಿಲ್ 8ರಂದು ಪ್ರಕಟಗೊಂಡ "ಕರೆಂಟ್ ಬಯೋಲಾಜಿ" ಮಾಸ ಪತ್ರಿಕೆಯಲ್ಲಿ ಹೇಳಿದ್ದಾರೆ.
ಈ ಜಲಚರ ಪ್ರಾಣಿಯು ಉಷ್ಣ ಮತ್ತು ಸಮಶೀತೋಷ್ಣ ವಲಯದ ತೇವ ಭರಿತ ಅರಣ್ಯ ಮತ್ತು ನದಿ ಪ್ರದೇಶಗಳಲ್ಲಿ ವಾಸಿಸುತ್ತದೆ. ಇದು ಇಡೀ ಶ್ವಾಸೋಚ್ಛಾಸ ಪ್ರಕ್ರಿಯೆಯನ್ನು ಚರ್ಮದ ಮೂಲಕ ಮಾಡುತ್ತದೆ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ.
ಇಡೀ ಜೀವ ವಿಕಸನ ಪ್ರಕ್ರಿಯೆಯಲ್ಲಿ ಸಂಪೂರ್ಣವಾಗಿ ಶ್ವಾಸಕೋಶಗಳನ್ನು ಕೇವಲ ಮೂರು ಬಾರಿ ಜೀವಿಗಳು ಕಳೆದುಕೊಂಡ ಉದಾಹರಣೆ ಇದೆ. ಇದು ವಿರಳಾತಿ ವಿರಳ ಜೀವ ವಿಕಸನ ಪ್ರಕ್ರಿಯೆ ಎಂದು ಬಿಕ್‌ಪೋರ್ಡ್ ತಮ್ಮ ಪ್ರಬಂಧದಲ್ಲಿ ವಾದ ಮಂಡಿಸಿದ್ದಾರೆ.
|