ಇದೋ ಬಂದಿದೆ ಮತ್ತೊಂದು ಆವಿಷ್ಕಾರ. ಸಸ್ಯಜನ್ಯ ಶರ್ಕರವೇ ಇನ್ನು ಮುಂದೆ ಕಾರುಗಳ ಇಂಧನವಾಗಲಿದೆ.
ಸಸ್ಯಗಳಲ್ಲಿ ದೊರೆಯುವ ಸಕ್ಕರೆಯನ್ನು ಹೈಡ್ರೋಜನ್ (ಜಲಜನಕ) ಆಗಿ ಪರಿವರ್ತಿಸುವ 'ಕ್ರಾಂತಿಕಾರಿ' ಪ್ರಕ್ರಿಯೆಯೊಂದನ್ನು ಅಭಿವೃದ್ಧಿಪಡಿಸಿರುವುದಾಗಿ ಸಂಶೋಧಕರು ಹೇಳಿದ್ದು, ಅದನ್ನು ಅತ್ಯಂತ ಮಿತವ್ಯಯದಲ್ಲಿ ಮತ್ತು ಪರಿಣಾಮಕಾರಿಯಾಗಿ ವಾಹನಗಳನ್ನೋಡಿಸಲು ಬಳಸಬಹುದಾಗಿದೆ ಎಂದು ಹೇಳಿಕೊಂಡಿದ್ದಾರೆ.
ಸಂಶೋಧಕರ ಪ್ರಕಾರ, ಗಿಡಗಳಲ್ಲಿ ದೊರೆಯುವ ಸಕ್ಕರೆಯ ಅಂಶ, ನೀರು ಮತ್ತು ಶಕ್ತಿಶಾಲಿ ಕಿಣ್ವಗಳ ಸಮ್ಮಿಶ್ರಣದೊಂದಿಗಿರುವ ಪರಿವರ್ತನಾ ಕ್ರಿಯೆಯು ಲಘು ಕ್ರಿಯಾ ಪರಿಸ್ಥಿತಿಗಳಲ್ಲಿ ಹೈಡ್ರೋಜನ್ ಮತ್ತು ಕಾರ್ಬನ್ ಡೈಆಕ್ಸೈಡ್ ಉತ್ಪಾದಿಸುತ್ತದೆ. ಇದು ಯಾವುದೇ ವಾಸನೆ ಉತ್ಪಾದಿಸುವುದಿಲ್ಲ. ಅನರೋಬಿಕ್ ಫರ್ಮೆಂಟೇಶನ್ ವಿಧಾನಗಳಿಗಿಂತ ಮೂರು ಪಟ್ಟು ಹೈಡ್ರೋಜನ್ ಉತ್ಪಾದಿಸಬಹುದಾಗಿದ್ದು, ಈ ವಿಧಾನವನ್ನು "ಇನ್ ವಿಟ್ರೋ ಸಿಂಥೆಟಿಕ್ ಬಯಾಲಜಿ" ಎಂದು ಕರೆಯಲಾಗುತ್ತದೆ.
ಈ ಪ್ರಕ್ರಿಯೆಯು, ಜಲಜನಕದ ಬಳಕೆಗೆ ಸಂಬಂಧಿಸಿ ಅತ್ಯಂತ ದೊಡ್ಡ ತಡೆ ಎಂದು ಅಂದುಕೊಂಡಿದ್ದ, ಕಡಿಮೆ ವೆಚ್ಚದ ಹೈಡ್ರೋಜನ್ ಉತ್ಪಾದನೆ, ಹೈಡ್ರೋಜನನ್ನು ಹೇಗೆ ಸಂಗ್ರಹಿಸುವುದು ಮತ್ತು ಅದನ್ನು ಪರಿಣಾಮಕಾರಿಯಾಗಿ ಹೇಗೆ ವಿತರಿಸುವುದು ಎಂಬ ಮೂರು ತಾಂತ್ರಿಕ ಅಡಚಣೆಯ ಅಂಶಗಳನ್ನು ಸಮರ್ಥವಾಗಿ ಎದುರಿಸುತ್ತದೆ ಎಂದಿದ್ದಾರೆ ಸಂಶೋಧಕರು.
ಇದೊಂದು ಕ್ರಾಂತಿಕಾರಿ ಕೆಲಸ. ಹೈಡ್ರೋಜನ್ ಸಂಶೋಧನೆಯಲ್ಲಿ ಇದೊಂದು ಹೊಚ್ಚ ಹೊಸ ಆಶಾದಾಯಕ ಬೆಳವಣಿಗೆ. ತಂತ್ರಜ್ಞಾನವನ್ನು ಮತ್ತಷ್ಟು ಸುಧಾರಿಸಿದಲ್ಲಿ, ಸಕ್ಕರೆ ಆಧಾರಿತ ವಾಹನಗಳು ಬೀದಿಗಿಳಿಯುವುದರಲ್ಲಿ ಸಂದೇಹವಿಲ್ಲ ಎಂದು ವರ್ಜೀನಿಯಾ ಟೆಕ್ ಯುನಿವರ್ಸಿಟಿಯ ಪ್ರಧಾನ ಸಂಶೋಧಕ ಪರ್ಸಿವಲ್ ಜಾಂಗ್ ಹೇಳಿದ್ದಾರೆ.
ಸಸ್ಯ ಸಂಪತ್ತಿನಿಂದ ಹೈಡ್ರೋಜನ್ ಬೇರ್ಪಡಿಸುವ ಅತ್ಯಂತ ಭರವಸೆಯ ವಿಧಾನವೊಂದನ್ನು ಪತ್ತೆ ಹಚ್ಚಿರುವುದಾಗಿ ಈ ಸಂಶೋಧಕರು ಹೇಳಿದ್ದಾರೆ. ಇದುವರೆಗೆ ಹೈಡ್ರೋಜನ್ ಬೇರ್ಪಡಿಸುವುದೇ ಅತ್ಯಂತ ದುಬಾರಿ ಪ್ರಕ್ರಿಯೆಯಾಗಿತ್ತು. ಇದೀಗ ಹೈಡ್ರೋಜನ್ ಈಗಿರುವ ಪೆಟ್ರೋಲಿಯಂ ಇಂಧನಕ್ಕಿಂತ ಹೆಚ್ಚು ಪರಿಶುದ್ಧವಾಗಿ, ಅಗ್ಗವೂ, ಪರಿಸರಕ್ಕೆ ಪೂರಕವೂ ಆಗಿರುವುದರಿಂದ ಜಲಜನಕದಿಂದ ಇಂಧನ ತಯಾರಿಸುವುದು ಹೇಗೆಂಬ ಬಗ್ಗೆ ತಲೆ ಕೆಡಿಸಿಕೊಂಡ ದೇಶ-ವಿದೇಶಗಳ ಸಂಶೋಧಕರು ನಿರಾಳತೆ ಅನುಭವಿಸಿದ್ದಾರೆ.
|