ಮೊಗಲರ ಸಾಮ್ರಾಟ ಷಾಜಹಾನ್ ವೈಯುಕ್ತಿಕವಾಗಿ ಬಳಸುತ್ತಿದ್ದ ಚಿನ್ನದ ಹಿಡಿಕೆಯ ಖಡ್ಗ ಗುರುವಾರ 1.7ಮಿಲಿಯನ್ ಪೌಂಡ್‌ಗಳಿಗೆ ಅಥವಾ 13.4ಕೋಟಿ ರೂ.ಗಳಿಗೆ ಮಾರಾಟವಾಗಿದೆ. ಅದು ನಿರೀಕ್ಷೆಗಿಂತಲೂ ಮೂರುಪಟ್ಟು ಹೆಚ್ಚು ಮೊತ್ತವನ್ನು ಗಳಿಸಿದೆ.
ಲಂಡನ್‌ನ ಅಂತಾರಾಷ್ಟ್ರೀಯ ಲಲಿತ ಕಲೆ ಹರಾಜು ಸಂಸ್ಥೆ ಬೋನ್ಹೆಮ್ ಈ ವಿಷಯವನ್ನು ಸ್ಪಷ್ಟಪಡಿಸಿದ್ದು, ತಮ್ಮ ಬಿಡ್ಡರ್‌ಗಳು ಸಹ ಈ ಚೂರಿಯಂತೆಯೇ ವಿಶೇಷತೆ ಹೊಂದಿದವರಾಗಿದ್ದಾರೆ ಎಂದು ತಿಳಿಸಿದೆ.
"ಸಾಮಾನ್ಯವಾಗಿ ಇಂತಹ ವಸ್ತುಗಳಿಗೆ ಇಬ್ಬರು-ಮೂವರು ಬಿಡ್ಡರ್‌ಗಳು ಮಾತ್ರ ಇರುತ್ತಾರೆ. ಆದರೆ ಇದಕ್ಕೆ ಹೆಚ್ಚಿನ ಬಿಡ್ಡರ್‌ಗಳಿದ್ದರು ಮತ್ತು ಸಾಕಷ್ಟು ಫೋನ್‌ಗಳು ಸಹ ಬರುತ್ತಿದ್ದವು. ಆದರೆ ಅಂತಿಮವಾಗಿ ಅದು 1.7ಮಿಲಿಯನ್ ಪೌಂಡ್‌ಗಳಿಗೆ ಸ್ಥಿರವಾಯಿತು" ಎಂದು ಬೋನ್ಹೆಮ್‌ನ ಜುಲಿಯನ್ ರೂಪ್ ತಿಳಿಸಿದ್ದಾರೆ. ಆದರೆ ಅವರು ಬಿಡ್ಡರ್ ಹೆಸರನ್ನು, ಗುರುತನ್ನು ಬಹಿರಂಗಪಡಿಸಲಿಲ್ಲ.
ಇತಿಹಾಸ ತಜ್ಞರ ಪ್ರಕಾರ ಈ ಚೂರಿಯು 1629-30ರ ಅವಧಿಯದಾಗಿದ್ದು, ಚಿನ್ನದಲ್ಲಿ ರಾಜನ ಹೆಸರನ್ನು ಕೆತ್ತಲಾಗಿದೆ. ಬಹುಶಃ ಇದು ಸಾಮ್ರಾಟನ 39ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಹಸ್ತಾಂತರವಾಗಿರಬಹುದೆನ್ನುವುದು ವಿಶ್ಲೇಷಕರ ಅಭಿಪ್ರಾಯವಾಗಿದೆ.
|