ಅಧ್ಯಕ್ಷ ಪರ್ವೇಜ್ ಮುಷರಫ್ ಅವರೊಂದಿಗೆ ಸರಕಾರಕ್ಕೆ ಸಂಬಂಧ ಪಟ್ಟ ಸಂಬಂಧಗಳನ್ನು ಮುಂದುವರಿಸಲು ತಮ್ಮ ಇಷ್ಟಪಡುವುದಿಲ್ಲ ಎಂದು ಪಾಕಿಸ್ತಾನ ಮುಸ್ಲೀಂ ಲೀಗ್ ನವಾಜ ಬಣದ ನಾಯಕರೋರ್ವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಸಂವಿಧಾನಿಕ ರೀತಿಯಲ್ಲಿ ರಾಷ್ಟ್ರದ ಅಧ್ಯಕ್ಷ ಪದವಿಯಲ್ಲಿ ಮುಂದುವರಿಯುತ್ತಿರುವ ಪರ್ವೇಜ್ ಮುಷರಫ್ ಅವರೊಂದಿಗೆ ಸರಕಾರದ ಯಾವುದೇ ಕೆಲಸಗಳಲ್ಲಿ ತಾವು ಪಾಲ್ಗೊಳ್ಳಲು ಇಷ್ಟಪಡುವುದಿಲ್ಲ ಎಂದು ಹಿರಿಯ ಸಚಿವ ಚೌಧರಿ ನಿಸಾರ್ ಅಲಿ ಖಾನ್ ಅವರು ಸ್ಪಷ್ಟಪಡಿಸಿದ್ದಾರೆ. ಶುಕ್ರವಾರ ಚೀನಾ ಭೇಟಿಗೆ ಸಚಿವ ತಂಡದೊಂದಿಗೆ ಮುಷರಫ್ ಅವರು ಪ್ರವಾಸ ಬೆಳೆಸಿದ ಸಂದರ್ಭದಲ್ಲಿ ಪಿಎಂಎಲ್ (ಎನ್) ಪಕ್ಷದ ಸಚಿವರು ನಿಯೋಗದಿಂದ ಹಿಂದೆ ಸರಿದಿದ್ದನ್ನು ಇಲ್ಲಿ ಸ್ಮರಿಸಬಹುದು.
ಮುಷರಫ್ ಅವರು ಸಂವಿಧಾನ ಬದ್ಧವಾಗಿ ಮತ್ತು ಅಧಿಕೃತವಾಗಿ ರಾಷ್ಟ್ರದ ಅಧ್ಯಕ್ಷರ ಪದವಿಗೆ ಆಯ್ಕೆಯಾಗಿದ್ದಾರೆ ಎಂದು ನಾವು ಭಾವಿಸುವುದಿಲ್ಲ. ಮುಷರಫ್ ಅವರು ಮಿಲಿಟರಿ ಬಲದ ಮೇಲೆ ಪಾಕಿಸ್ತಾನದ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ ಎಂದು ಟೈಮ್ಸ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಸಂವಿಧಾನಿಕವಾಗಿ ಮುಷರಫ್ ಆಯ್ಕೆಯಾಗಿದ್ದಾರೆ ಎಂದು ಆರೋಪ ಮಾಡಿರುವ ಪಿಎಂಎಲ್ (ಎನ್) ಬಣದ ಸಂಸದರು ಅದೇ ಮುಷರಫ್ ಅವರಿಂದ ಅಧಿಕಾರ ಪ್ರಮಾಣ ವಚನ ಏಕೆ ಸ್ವೀಕರಿಸಿದರು ಎಂದು ಕೇಳಿದ ಪ್ರಶ್ನೆಗೆ, ರಾಜಕೀಯ ಸೌಹಾರ್ಧತೆಯನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಅಧ್ಯಕ್ಷರಿಂದ ಪ್ರಮಾಣ ವಚನವನ್ನು ಪಕ್ಷದ ಸಚಿವರು ಸ್ವೀಕರಿಸಿದರು ಎಂದು ನಿಸಾರ್ ಅಲಿ ಖಾನ್ ಹೇಳಿದರು.
|