ಆಫ್ಘಾನಿಸ್ತಾನದ ನಿಮ್ರೋಜ್ ಪ್ರಾಂತ್ಯದ ಬಳಿ ಭಾರತೀಯ ಮೂಲದ ಇಂಜಿನಿಯರುಗಳ ತಂಡದ ಮೇಲೆ ನಡೆದ ಆತ್ಮಾಹುತಿ ದಾಳಿಯಲ್ಲಿ ಇಬ್ಬರು ಭಾರತೀಯ ನಾಗರಿಕರು ಸಾವನ್ನಪ್ಪಿದ್ದಾರೆ.
ಆಫ್ಘಾನಿಸ್ತಾನದ ನೈಋತ್ಯ ಭಾಗದಲ್ಲಿ ರಸ್ತೆ ನಿರ್ಮಾಣ ಕಾರ್ಯದಲ್ಲಿ ತೋಡಗಿದ್ದ ತಂಡದ ಮೇಲೆ ಆತ್ಮಾಹುತಿ ದಾಳಿಯಲ್ಲಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದು, ಇನ್ನೂ ಅನೇಕರು ಗಾಯಗೊಂಡಿದ್ದಾರೆ ಎಂದು ನೈಋತ್ಯ ಪ್ರಾಂತ್ಯದ ಗವರ್ನರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಸ್ತೆ ನಿರ್ಮಾಣ ಮತ್ತಿತರ ಮೂಲಭೂತ ಸೌಕರ್ಯಗಳ ನಿರ್ಮಾಣದಲ್ಲಿ ನಿರತವಾಗಿರುವ ಭಾರತೀಯ ಮೂಲದ ನಾಗರಿಕರ ಮೇಲೆ ಉಗ್ರವಾದಿಗಳು ದಾಳಿ ನಡೆಸುವುದು, ಅಪಹರಣ ಮಾಡುವುದು ಆಫ್ಘಾನಿಸ್ತಾನದಲ್ಲಿ ಸಾಮಾನ್ಯ ಸಂಗತಿಯಾಗಿದ್ದು, ಪ್ರತಿ ಬಾರಿ ಭಾರತೀಯರನ್ನು ಅಪಹರಣ ಮಾಡಿದ ಸಂದರ್ಭದಲ್ಲಿ ಆಫ್ಘಾನಿಸ್ತಾನ ತೊರೆದು ಸ್ವದೇಶಕ್ಕೆ ಭಾರತೀಯರು ಮರಳಬೇಕು ಎಂದು ಉಗ್ರರು ಒತ್ತಾಯಿಸುತ್ತಿದ್ದಾರೆ.
ಯುದ್ಧ ಪೀಡಿತ ಆಫ್ಘಾನಿಸ್ತಾನದಲ್ಲಿ ಭಾರತ ಸರಕಾರವು ಆಫ್ಘಾನಿಸ್ತಾನ-ಇರಾನ್ ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯನ್ನು ಹೆರಾತ್ ಪ್ರಾಂತ್ಯದ ಝರಾಂಜ್-ಡೆಲರಾಮ್ ಪ್ರದೇಶದಲ್ಲಿ ನಿರ್ಮಿಸುತ್ತಿದೆ. ರಾಷ್ಟ್ರೀಯ ಹೆದ್ದಾರಿಯ ನಿರ್ಮಾಣದಿಂದ ಆಫ್ಘಾನಿಸ್ತಾನ್ ಇತರ ದೇಶಗಳೊಂದಿಗೆ ಸುಲಭ ಸಂಪರ್ಕ ಸಾಧಿಸಬಹುದಾಗಿದೆ.
|