ಪಾಕಿಸ್ತಾನದ ಅಣ್ವಸ್ತ್ರದ ಸುರಕ್ಷತೆ ಬಗ್ಗೆ ಪಾಶ್ಚಾತ್ಯರ ಕಳವಳ ಹೆಚ್ಚಾಗುತ್ತಿರುವಂತೆಯೇ, ಇಸ್ಲಾಮಾಬಾದಿನಲ್ಲಿರುವ ತನ್ನ ರಾಯಭಾರ ಕಚೇರಿಯ ಅಧಿಕಾರಿಯೊಬ್ಬರಿಗೆ ಪಾಕಿನ ಅಣ್ವಸ್ತ್ರ ನಿಯಂತ್ರಣ ಆಸ್ತಿಗೆ ನೇರ ಪ್ರವೇಶಾನುಮತಿ ಇರಬೇಕು ಎಂದು ಅಮೆರಿಕ ಬಯಸಿದೆ.
ಪಾಕಿಸ್ತಾನದಲ್ಲಿ ಅಮೆರಿಕ ಮಿಲಿಟರಿ ಸಿಬ್ಬಂದಿಯ ನಿಯೋಜನೆಗೆ ಸಂಬಂಧಿಸಿ ವಾಷಿಂಗ್ಟನ್ ಇಸ್ಲಾಮಾಬಾದಿಗೆ ಕಳುಹಿಸಿದ್ದ 11 ಬೇಡಿಕೆಗಳ ಪಟ್ಟಿಯನ್ನು ಪಾಕ್ ಅಧಿಕಾರಿಗಳು ತಿರಸ್ಕರಿಸಿದ ಬಳಿಕ ಅಮೆರಿಕ ರಾಜ್ಯಾಂಗ ಇಲಾಖೆಯು ಅಣ್ವಸ್ತ್ರ ಪ್ರವೇಶಾನುಮತಿ ಕುರಿತ ಪ್ರಸ್ತಾಪವನ್ನು ಪಾಕ್ ಸರಕಾರಕ್ಕೆ ಕಳುಹಿಸಿದೆ.
ಇಲ್ಲಿನ ಪರಮಾಣು ವಿಷಯಗಳ ಕುರಿತು ಅಮೆರಿಕ ರಾಯಭಾರ ಕಚೇರಿಯಲ್ಲಿ ಶಾಶ್ವತವಾಗಿ ನಿಯೋಜಿಸಿರುವ ಅಧಿಕಾರಿಗೆ ರಾಷ್ಟ್ರೀಯ ಕಮಾಂಡ್ ಪ್ರಾಧಿಕಾರ (ಎನ್‌ಸಿಎ) ಕಚೇರಿಗೆ ನೇರ ಪ್ರವೇಶಾನುಮತಿ ಇರಬೇಕು ಎಂದು ವಾಷಿಂಗ್ಟನ್ ಮನವಿ ಮಾಡಿಕೊಂಡಿರುವುದಾಗಿ ದಿ ನ್ಯೂಸ್ ವರದಿ ಮಾಡಿದೆ.
ಈ ಹಿಂದೆ ಕಳುಹಿಸಲಾಗಿದ್ದ ಬೇಡಿಕೆ ಪಟ್ಟಿಯಲ್ಲಿ, ಅಮೆರಿಕ ಸರಕಾರವು ಕಳುಹಿಸುವ ಅಮೆರಿಕನ್ ಪೌರರನ್ನು ಪಾಕಿಸ್ತಾನದ ಕಾನೂನಿನ ಚೌಕಟ್ಟಿನಿಂದ ಹೊರತಾಗಿ ನೋಡಿಕೊಳ್ಳಬೇಕು ಎಂದು ಕೋರಲಾಗಿತ್ತು.
ಪಾಕಿಸ್ತಾನದ ಸೂಕ್ಷ್ಮ ಪ್ರದೇಶಗಳಲ್ಲಿ ವೃಥಾ ಮಧ್ಯಪ್ರವೇಶಿಸುವ ಅತ್ಯಂತ ಅಪಾಯಕಾರಿ ಕ್ರಮ ಇದು ಎಂದು ಪಾಕಿಸ್ತಾನದ ಭದ್ರತಾ ವಿಶ್ಲೇಷಕ ಶಿರೀನ್ ಮಜಾರಿ ತಿಳಿಸಿದ್ದಾರೆ.
|