ಕಾಠ್ಮಂಡು: ನೇಪಾಳದಲ್ಲಿ ನಡೆದಿರುವ ಮಹಾಚುನಾವಣೆಯು ಕೆಲವು ಅಚ್ಚರಿಯ ಫಲಿತಾಂಶಗಳನ್ನು ನೀಡಿದೆ. ಒಂದೆಡೆ ಮಾಜಿ ಮಾವೋವಾದಿ ಬಂಡುಕೋರರು ಪ್ರಚಂಡ ವಿಜಯ ಸಾಧಿಸಿದ್ದರೆ, ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದ 'ಮೋಸ್ಟ್ ವಾಂಟೆಡ್' ಆರೋಪಿಯೊಬ್ಬ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದು ಬಂದಿರುವುದಾಗಿ ವರದಿಯಾಗಿದೆ.
ಬಾಬನ್ ಸಿಂಗ್ ಎಂಬಾತ 2007ರ ಸೆಪ್ಟಂಬರ್‌ನಲ್ಲಿ ನಡೆಸಲಾದ ಸರಣಿ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿರುವುದಾಗಿ ಆರೋಪಿಸಲಾಗಿದೆ. ಈ ಸ್ಫೋಟದಲ್ಲಿ ಮೂವರು ಹತರಾಗಿದ್ದು, ಇತರ ಹಲವಾರು ಮಂದಿ ಗಾಯಗೊಂಡಿದ್ದರು. ಸಿಂಗ್ ರೌಟಾಹಟ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಫರ್ಧಿಸಿದ್ದು, ಪ್ರಚಾರದುದ್ದಕ್ಕೂ ಗೈರುಹಾಜರಾಗಿದ್ದರೂ ಚುನಾವಣೆಯಲ್ಲಿ ಗೆದ್ದುಬಂದಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ತೆರಾಯ್ ಗ್ರಾಮದಲ್ಲಿ ನಡೆದ ಕೊಲೆಯೊಂದರ ಶಂಕಿತ ಆರೋಪಿಯೂ ಆಗಿರುವ ಸಿಂಗ್ ಈ ಪ್ರಕರಣದ ಬಳಿಕ ಭೂಗತವಾಗಿದ್ದು, ಪೊಲೀಸರು ಈತನ ಪತ್ತೆಗೆ ಮುಂದಾಗಿದ್ದರು ಎಂದು ಅವರು ತಿಳಿಸಿದ್ದಾರೆ.
ಸಿಂಗ್ ತಂದೆ ಜಗನ್ನಾಥ ಸಿಂಗ್ ತನ್ನ ಪುತ್ರನ ಪರವಾಗಿ ಚುನಾವಣಾ ಪ್ರಚಾರ ಮಾಡಿದ್ದು, ತನ್ನ ಪುತ್ರನಿಗೆ ಮತನೀಡುವ ಮೂಲಕ ಆತನನ್ನು ಕಾಪಾಡಿ ಎಂದು ವಿನಂತಿಸಿದ್ದರು. "ಮರಣ ದಂಡನೆಯಿಂದ ತನ್ನನ್ನು ರಕ್ಷಿಸಿ" ಎಂಬ ಘೋಷಣೆಯೊಂದಿಗೆ, ಕತ್ತಿಗೆ ಉರುಳಿನ ಚಿತ್ರವಿರುವ ಭಿತ್ತಿಚಿತ್ರಗಳನ್ನು ಕ್ಷೇತ್ರದೆಲ್ಲೆಡೆ ಅಂಟಿಸಲಾಗಿತ್ತು.
ತನ್ನ ಪುತ್ರ ಗೆದ್ದಿರುವ ದೃಢಪತ್ರವನ್ನು ಪಡೆಯಲು ಜಗನ್ನಥ್ ಸಿಂಗ್ ತೆರಳಿದ್ದರಾದರೂ ಚುನಾವಣಾ ಆಯೋಗವು ಇದನ್ನು ಅಭ್ಯರ್ಥಿಗೇ ನೀಡುವುದಾಗಿ ಹೇಳಿದೆ.
|