ನೇಪಾಳದಲ್ಲಿ ಮಾವೋವಾದಿಗಳು ಸರಕಾರ ರಚಿಸಲು ರಂಗ ಸಜ್ಜಾಗಿದ್ದು, ಮಾವೋವಾದಿ ನಾಯಕ ಪ್ರಚಂಡ ಅವರು ಪ್ರಜಾಪ್ರಭುತ್ವ ಸರಕಾರದ ಪ್ರಥಮ ಅಧ್ಯಕ್ಷರಾಗುವ ಸಾಧ್ಯತೆಗಳು ನಿಚ್ಚಳವಾಗಿದೆ.
ಚುನಾವಣೆಯಲ್ಲಿ ಅಭೂತಪೂರ್ವ ಗೆಲವು ಸಾಧಿಸಿರುವ ಮಾವೋವಾದಿಗಳ ನಾಯಕ ಪ್ರಚಂಡ, ತಿಂಗಳೊಳಗಾಗಿ 240 ವರ್ಷಗಳಷ್ಟು ಹಳೆಯ ರಾಜಪ್ರಭುತ್ವವನ್ನು ತೊಡೆದು ಹಾಕುವುದಾಗಿ ಹೇಳಿದ್ದಾರೆ.
ಮಧ್ಯಂತರ ಸಂವಿಧಾನದ ಕುರಿತ ಸಪ್ತಪಕ್ಷಗಳ ಸಭೆ ನಡೆಸಿರುವ ವೇಳೆಗೆ ರಾಜಪ್ರಭುತ್ವವನ್ನು ತೊಡೆದು ಹಾಕವ ಕುರಿತು ನಿರ್ಧರಿಸಲಾಗಿದ್ದು, ನೇಪಾಳ ಅಧಿವೇಶನದ ಪ್ರಥಮ ಸಭೆಯಲ್ಲೇ ಈ ಕ್ರಮಕ್ಕೆ ಮುಂದಾಗುವುದಾಗಿ ಪ್ರಚಂಡ ಹೇಳಿದ್ದಾರೆ. ಅವರು ಎನ್‌ಡಿಟಿವಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡುತ್ತಿದ್ದರು.
ರಾಜಪ್ರಭುತ್ವವನ್ನು ಅಂತ್ಯಗೊಳಿಸುವ ಕ್ರಮಕ್ಕೆ ಯಾವುದೇ ವಿರೋಧಗಳು ವ್ಯಕ್ತವಾಗಬಹುದೇ ಎಂದು ಕೇಳಲಾದ ಪ್ರಶ್ನೆಗೆ, ಇಂತಹ ಸಾಧ್ಯತೆಗಳನ್ನು ತಳ್ಳಿಹಾಕಿದ ಪ್ರಚಂಡ, ಎಲ್ಲ ಪಕ್ಷಗಳು ರಾಜಪ್ರಭುತ್ವದ ಕುರಿತು ವಿರೋಧ ವ್ಯಕ್ತಪಡಿಸಿದ್ದು, ಪ್ರಜಾಪ್ರಭುತ್ವದ ಕುರಿತಂತೆ ಒಲವು ಹೊಂದಿದ್ದಾರೆ ಎಂದು ಹೇಳಿದ್ದಾರೆ.
|