ನೇಪಾಳದಲ್ಲಿ ಸಂಯುಕ್ತ ರಾಷ್ಟ್ರ ಸಂಘದ ಕಾರ್ಯಾಚರಣೆಯ ಅವಶ್ಯಕತೆ ಇಲ್ಲ ಎಂದು ಹಿರಿಯ ಮಾವೋವಾದಿಗಳ ಮುಖಂಡ ತಿಳಿಸಿದ್ದಾರೆ. ಆದರೆ ನೇಪಾಳದಲ್ಲಿ ಚುನಾವಣೆಯ ನಂತರವೂ ತನ್ನ ಕಾರ್ಯಾಚರಣೆಯ ಅಗತ್ಯವಿದೆ ಎಂದು ಯುಎನ್ ಅಧಿಕಾರಿಗಳು ತಿಳಿಸಿದ್ದಾರೆ.
ನೇಪಾಳದಲ್ಲಿ ಸಂವಿಧಾನ ರಚನಾ ಸಮಿತಿಯ ಚುನಾವಣೆಯ ನಂತರ ಸಂಯುಕ್ತ ರಾಷ್ಟ್ರ ಸಂಘದ ಕಾರ್ಯ ಅಂತ್ಯವಾಗದು ಎಂದು ಯುಎನ್‌ಎಂಐನ ಮುಖ್ಯಸ್ಥ ಐನ್ ಮಾರ್ಟಿನ್ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
ಸಂವಿಧಾನ ರಚನಾ ಸದನ ಚುನಾವಣೆ ದೇಶದಲ್ಲಿ ಶಾಂತಿ ಸ್ಥಾಪನೆಯ ಪ್ರಕ್ರಿಯೆಯ ಒಂದು ಭಾಗ ಎಂದು ಹೇಳಿರುವ ಮಾರ್ಟಿನ್ ಅವರು ದೇಶದಲ್ಲಿ ಸಂಪೂರ್ಣ ಶಾಂತಿ ನೆಲೆಗೊಂಡ ನಂತರವೇ ಸಂಯುಕ್ತ ರಾಷ್ಟ್ರದ ಸಂಘದ ಕೆಲಸ ತಾರ್ಕಿಕವಾಗಿ ಅಂತ್ಯಗೊಳ್ಳಲಿದೆ ಎಂದಿದ್ದಾರೆ.
ಸಮಗ್ರ ಶಾಂತಿ ಒಪ್ಪಂದದಡಿಯಲ್ಲಿ ಸಂಯುಕ್ತ ರಾಷ್ಟ್ರ ಸಂಘದ ಶಾಂತಿ ಪಾಲನಾ ಪಡೆಯು ನೇಪಾಳಿ ಮಿಲಿಟರಿ ಮತ್ತು ಮಾವೋವಾದಿಗಳ ನಡುವೆ ಸೌಹಾರ್ಧಯುತ ಸಂಬಂಧ ಸ್ಥಾಪಿಸಬೇಕಾಗಿದೆ ಎಂದು ಮಾಹಿತಿ ನೀಡಿದರು.
ದೇಶದಲ್ಲಿ ಶಾಶ್ವತವಾಗಿ ಶಾಂತಿ ನೆಲೆಸಲು ರಾಜಕೀಯ ಪಕ್ಷಗಳು ಒಗ್ಗಟ್ಟಾಗಿ ದುಡಿಯ ಬೇಕು ಇದಕ್ಕೆ ಪೂರಕವಾಗಿ ಯುಎನ್ ಮಾರ್ಗದರ್ಶನ ನೀಡಲಿದೆ ಎಂದು ಅವರು ಹೇಳಿದರು.
ಸಂವಿಧಾನ ರಚನಾ ಸದನ ಚುನಾವಣೆಯ ಯಶಸ್ಸನ್ನು ಶ್ಲಾಘಿಸಿರುವ ವಿಶ್ವಸಂಸ್ದೆಯ ಮುಖ್ಯ ಕಾರ್ಯದರ್ಶಿ ಬಾನ್ ಕಿ ಮೂನ್‌ರ ಸಂದೇಶವನ್ನು ತಲುಪಿಸುವುದಕ್ಕೆ ಮಾರ್ಟಿನ್ ಅವರು ಪ್ರಧಾನಿ ಗಿರಿಜಾ ಪ್ರಸಾದ್ ಕೋಯಿರಾಲರನ್ನು ಭೇಟಿಯಾದರು.
|