ಅರವತ್ತು ದಶಕಗಳ ಹಿಂದೆ ನೇಪಾಳ ಚಕ್ರವರ್ತಿ ತ್ರಿಭುವನ ಅವರು ಭಾರತದಲ್ಲಿ ಆಶ್ರಯ ಪಡೆದಿದ್ದರು. ಇತಿಹಾಸ ಮರುಕಳಿಸುತ್ತಿದೆ ಎನ್ನುವ ರೀತಿಯಲ್ಲಿ ಈಗಿನ ನೇಪಾಳದ ಚಕ್ರವರ್ತಿ ಜ್ಞಾನೇಂದ್ರ ಅವರು ನೇಪಾಳ ಚುನಾವಣೆಯ ಫಲಿತಾಂಶಗಳನ್ನು ಗಮನಿಸಿ ಭಾರತದಲ್ಲಿ ಆಶ್ರಯ ಪಡೆಯಬಹುದು ಎನ್ನುವ ಊಹಾಪೋಹಗಳನ್ನು ನಾರಾಯಣ ಹಿತಿ ಅರಮನೆಯು ತಿರಸ್ಕರಿಸಿದೆ.
ಮಾವೋವಾದಿಗಳು ಅದಿಕಾರಕ್ಕೆ ಬಂದು ನೇಪಾಳದಲ್ಲಿ ಅರಸೋತ್ತಿಗೆಯನ್ನು ಕಿತ್ತೊಗೆದರೂ ತಾನು ನೇಪಾಳದಲ್ಲಿ ಇರುವುದಾಗಿ ಚಕ್ರವರ್ತಿ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ. 14 ತಿಂಗಳುಗಳ ಕಾಲ ಪೂರ್ಣ ಪ್ರಮಾಣದ ಆಡಳಿತವನ್ನು ನಡೆಸಿದ ಜ್ಞಾನೇಂದ್ರ ಅವರು ಆ 14 ತಿಂಗಳುಗಳ ಅವಧಿಯಲ್ಲಿ ರಾಜ ಮನೆತನದ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸುವುದನ್ನು ನಿರ್ಬಂಧಿಸಿದ್ದರು. ಭಾರತೀಯ ಮಾಧ್ಯಮಗಳಲ್ಲಿ ಜ್ಞಾನೇಂದ್ರ ಅವರು ಭಾರತಕ್ಕೆ ಪಲಾಯನ ಮಾಡಬಹುದು ಎನ್ನುವ ವರದಿಗಳು ಪ್ರಕಟವಾಗುತ್ತಿರುವುದನ್ನು ಗಮನಿಸಿ ತಮ್ಮ ಹೇಳಿಕೆಯನ್ನು ಅರಮನೆಯ ಕಾರ್ಯದರ್ಶಿಗಳ ಮುಖಾಂತರ ನೀಡಿದ್ದಾರೆ.
ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ಸುಳ್ಳು ಮತ್ತು ಆಧಾರ ರಹಿತವಾಗಿದ್ದು, ಈ ತೆರನಾದ ವರದಿಗಳನ್ನು ನಾರಾಯಣ ಹಿತಿ ಅರಮನೆಯ ಸಚಿವಾಲಯ ಅಲ್ಲಗಳೆಯುತ್ತದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಸೋಮವಾರ ನೇಪಾಳ ಚುನಾವಣಾ ಆಯೋಗವು ಸಂಸತ್ತಿಗೆ ನಡೆದ ಚುನಾವಣಾ ಫಲಿತಾಂಶಗಳನ್ನು ಪ್ರಕಟಿಸಿದ್ದು, ನೇರ ಚುನಾವಣೆ ನಡೆದ 240 ಸ್ಥಾನಗಳ ಪೈಕಿ ಮಾವೋವಾದಿಗಳು 120 ಸ್ಥಾನಗಳನ್ನು ಗೆದ್ದುಕೊಂಡು ಸರಳ ಬಹುಮತ ಸಂಪಾದಿಸಿದ್ದಾರೆ.
|