ಲ್ಯಾಟಿನ್ ಅಮೆರಿಕದ ಈ ದೇಶದ ರಾಜಧಾನಿಯ ಹೊರವಲಯದ ಶಾಲೆಯೊಂದರಲ್ಲಿ ಪ್ರತಿನಿತ್ಯವೂ ಪ್ರಾರ್ಥನೆಯ ರೂಪದಲ್ಲಿ ಭಾರತದ ರಾಷ್ಟ್ರಗೀತೆ ಜನ ಗಣ ಮನ... ಸುಶ್ರಾವ್ಯವಾಗಿ ಎಳೆ ಕಂಠಗಳಿಂದ ತೇಲಿ ಬರುತ್ತಿರುತ್ತದೆ.
ರಿಪಬ್ಲಿಕ್ ಡೆ ಲಾ ಇಂಡಿಯಾ ಅಥವಾ ರಿಪಬ್ಲಿಕ್ ಇಂಡಿಯಾ ಎಂದು ಕರೆಯಲಾಗುವ ಈ ಸ್ಥಳದ ಚಿಲಿ ನಗರ ಸಭೆಯ ಶಾಲೆಯಲ್ಲಿ ನೂರು ಕೋಟಿ ಭಾರತೀಯರಿಗೆ ಗೌರವ ಸಲ್ಲಿಸಲಾಗುತ್ತಿದೆ.
1968ರಲ್ಲಿ ನಾಲ್ಕು ದಶಕಗಳ ಹಿಂದೆ ಭಾರತದ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರು ಈ ಶಾಲೆಗೆ ಭೇಟಿ ನೀಡಿದ್ದರು. ಮೂರು ದಿನಗಳ ಭೇಟಿಗಾಗಿ ಚಿಲಿಗೆ ಆಗಮಿಸಿರುವ ಭಾರತದ ಪ್ರಥಮ ಮಹಿಳಾ ರಾಷ್ಟ್ರಪತಿ ಪ್ರತಿಭಾ ದೇವಿಸಿಂಗ್ ಪಾಟೀಲ್ ಶೇಖಾವತ್ ಅವರು ಈ ಶಾಲೆಗೆ ಭೇಟಿ ನೀಡಲಿದ್ದಾರೆ.
ಶಾಲೆಯ ಆವರಣವನ್ನು ಪ್ರವೇಶಿಸುತ್ತಿದ್ದಂತೆ ಸನಾತನ ಧರ್ಮದ ಬೀಜ ಮಂತ್ರ ಎಂದು ಹೇಳಲಾಗುವ ಓಂ ಎಲ್ಲರ ಕಣ್ಣಿಗೆ ಕಾಣುವಂತೆ ರಾಚುತ್ತದೆ. ಶಾಲಾ ವಿದ್ಯಾರ್ಥಿಗಳ ಕೊರಳು ಅಲಂಕರಿಸಿರುವ ಟೈನಲ್ಲಿ ಭಾರತದ ತ್ರಿವರ್ಣ ಧ್ವಜ ಮತ್ತು ಚಿಲಿಯ ಧ್ವಜಗಳು ಸಮ್ಮಿಳಿತಗೊಂಡಿವೆ.
ಬಹುಶಃ ಈ ಪದ್ಯ ಬರೆಯುವ ಸಂದರ್ಭದಲ್ಲಿ ರವಿಂದ್ರ ನಾಥ್ ಟಾಗೋರ್ ಕೂಡ ನಾನು ಬರೆದ ಪದ್ಯವೊಂದು ಶಾಲಾ ಮಕ್ಕಳ ನಿತ್ಯ ಪ್ರಾರ್ಥನೆಯಾಗಲಿದೆ ಎಂದು ಎಣಿಸಿರಲಿಕ್ಕಿಲ್ಲವೆನೊ? ಕೇವಲ ನಕಾಶೆಯಲ್ಲಿ ನೋಡಿದ ಭಾರತದ ರಾಷ್ಟ್ರಗೀತೆಯೊಂದನ್ನು ಚಿಲಿಯ ಮಕ್ಕಳು ಸುಶ್ರಾವ್ಯವಾಗಿ ಹಾಡಲಿದ್ದಾರೆ. ಆ ಹಾಡು ಕೇಳುವ ಭಾಗ್ಯ ಪ್ರತಿಭಾದೇವಿಯವರಿಗೆ.
|