ಜಾಗತಿಕ ಮಟ್ಟದಲ್ಲಿ ಲೋಹ ವ್ಯಾಪಾರ ಮಾಡುತ್ತೇವೆ ಎಂದು ಹೇಳಿ ಇಂಗ್ಲೆಂಡ್ ಮತ್ತು ಅಮೆರಿಕದಲ್ಲಿ ಇರುವ ಬ್ಯಾಂಕುಗಳಿಗೆ 300 ದಶಲಕ್ಷ ಪೌಂಡ್ ಪಂಗನಾಮ ಹಾಕಿದ ಮೂವರು ಅನಿವಾಸಿ ಭಾರತೀಯರು ತಪ್ಪಿತಸ್ಥರು ಎಂದು ವಿಚಾರಣೆಯಲ್ಲಿ ಸಾಬೀತಾಗಿದ್ದು, ದೀರ್ಘಾವಧಿ ಶಿಕ್ಷೆ ಅನುಭವಿಸುವುದಕ್ಕೆ ಸಿದ್ದರಾಗಿದ್ದಾರೆ.
ಆರ್‌ಬಿಜಿ ರಿಸೌರ್ಸ್ ಕಂಪನಿಯ ಮಾಜಿ ನಿರ್ದೇಶಕರುಗಳಾದ ವೀರೇಂದ್ರ ರಸ್ತೋಗಿ (39), ಆನಂದ್ ಜೈನ್ (43) ಮತ್ತು ಗೌತಮ್ ಮಜುಂದಾರ್ (57) ಎಂಬ ಅನಿವಾಸಿ ಭಾರತೀಯರು ಇಂಗ್ಲೆಂಡ್ ಮತ್ತು ಅಮೆರಿಕದ ಬ್ಯಾಂಕುಗಳಿಗೆ ಮೋಸ ಮಾಡಿದ್ದಾರೆ ಎಂದು ಲಂಡನ್‌ನಲ್ಲಿ ಇರುವ ಸೌಥ್ ವರ್ಕ್ ನ್ಯಾಯಾಲಯ ತೀರ್ಪು ನೀಡಿ ಒಂದು ವಾರಗಳ ಕಾಲ ನ್ಯಾಯಾಂಗ ಬಂಧನವನ್ನು ಆರೋಪಿತರಿಗೆ ವಿಧಿಸಿದೆ.
ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೇಮ್ಸ್ ವ್ಯಾಡ್ಸ್‌ವರ್ಥ್ ಅವರು ಆರೋಪಿತರಿಗೆ ಸುದೀರ್ಘಾವಧಿಯ ಶಿಕ್ಷೆ ವಿಧಿಸುವ ಸಾಧ್ಯತೆಯನ್ನು ವ್ಯಕ್ತಪಡಿಸಿದ್ದು, ಜೂನ್ ಐದರಂದು ಅಂತಿಮ ತೀರ್ಪು ನೀಡಲಾಗುವುದು ಎಂದು ಹೇಳಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ತನಿಖೆಯು ಸುದೀರ್ಘ ಆವಧಿಯವರಗೆ ನಡೆದು, ಇದೀಗ ಪ್ರಕರಣದ ವಿಚಾರಣೆ ಅಂತ್ಯಗೊಂಡಿದೆ. ಗಂಭೀರ ಅಪರಾಧ ತನಿಖಾ ಇಲಾಖೆಯು 2002ರಲ್ಲಿ ರಸ್ತೋಗಿಯನ್ನು ಅವನ ನಿವಾಸದಲ್ಲಿ ಬಂಧಿಸಿತ್ತು.
ಆರು ವರ್ಷಗಳ ಕಾಲ ರಸ್ತೋಗಿ ಅಸ್ತಿತ್ವದಲ್ಲಿ ಇಲ್ಲದ ಕಂಪನಿಗಳ ಹೆಸರಿನಲ್ಲಿ 324 ಸುಳ್ಳು ದಾಖಲೆಗಳನ್ನು ಬಳಸಿದ್ದನು. ನೀಡಿರುವ ಕೆಲ ಕಂಪನಿಗಳ ಹೆಸರುಗಳು ಮತ್ತು ವಿಳಾಸಗಳು ಸಣ್ಣ ಮನೆ, ಅಂಗಡಿಗಳನ್ನು ಒಳಗೊಂಡಿದ್ದು ಕುರ್ಚಿ ಮತ್ತು ಟೆಬಲ್ ಬಿಟ್ಟರೆ ಅಲ್ಲಿ ಏನೂ ಇರಲಿಲ್ಲ ಎನ್ನುವುದು ತನಿಖೆಯಲ್ಲಿ ತಿಳಿದುಬಂದಿದೆ.
ಬ್ಯಾಂಕುಗಳಿಂದ ಸಾಲ ಪಡೆಯುವ ಸಂದರ್ಭದಲ್ಲಿ ರಸ್ತೋಗಿ ನೀಡಲಾಗಿದ್ದ ಭಾರತೀಯ ವಿಳಾಸವು ಒಂದು ದನದ ಕೊಟ್ಟಿಗೆಯಾಗಿತ್ತು. ಅಮೆರಿಕದಲ್ಲಿದ್ದ ಕಂಪನಿಯ ವಿಳಾಸವು ಲಾಂಡ್ರಿ ಅಂಗಡಿಯಾಗಿತ್ತು ಎನ್ನುವುದನ್ನು ತನಿಖೆಯಲ್ಲಿ ಬಯಲಾಗಿದೆ. ಈ ಮೋಸದ ಜಾಲವನ್ನು ಮುಚ್ಚಿಡುವ ಏಕೈಕ ಉದ್ದೇಶದಿಂದ ಕೋಟಿಗಟ್ಟಲೆ ಮಿಲಿಯನ್ ಡಾಲರ್ ಮತ್ತು ಪೌಂಡ್‌ಗಳನ್ನು ವಂಚಕರು ಬೇಕಾಬಿಟ್ಟಿಯಾಗಿ ವೆಚ್ಚ ಮಾಡಿದ್ದರು.
|