ಗಲ್ಲು ಶಿಕ್ಷೆಗೆ ಒಳಗಾಗಿರುವ ಸರಭ್‌ಜೀತ್ ಸಿಂಗ್ ಪರವಾಗಿ ತಾನು ಅಧ್ಯಕ್ಷ ಪರ್ವೇಜ್ ಮುಷರಫ್ ಮತ್ತು ಪ್ರಧಾನಿ ಯುಸೂಫ್ ರಾಜಾ ಗಿಲಾನಿ ಅವರಿಗೆ ಕ್ಷಮೆಯಾಚನಾ ಅರ್ಜಿಯನ್ನು ಸಲ್ಲಿಸುವುದಾಗಿ ಪಾಕಿಸ್ತಾನದ ಮಾಜಿ ಮಾನವ ಹಕ್ಕುಗಳ ಸಚಿವ ಅನ್ಸಾರ್ ಬರ್ನೆ ಅವರು ಹೇಳಿದ್ದಾರೆ.
ಸರಭ್‌ಜೀತ್ ಅವರ ಗಲ್ಲು ಶಿಕ್ಷೆಗೆ ಸಂಬಂಧಿಸಿದಂತೆ ಅಧ್ಯಕ್ಷರ ಬಳಿ ಯಾವುದೇ ಕ್ಷಮೆ ಯಾಚನಾ ಅರ್ಜಿಗಳು ಬಾಕಿ ಇಲ್ಲ ಎಂದು ಪರ್ವೇಜ್ ಮುಷರಫ್ ಅವರ ವಕ್ತಾರರು ಹೇಳಿಕೆ ನೀಡಿದ ನಂತರ ಬರ್ನೆ ಪ್ರತಿಕ್ರಿಯಿಸಿದ್ದು, ಶೀಘ್ರವೇ ಈ ಕುರಿತು ಪರ್ವೇಜ್ ಮುಷರಫ್ ಮತ್ತು ಪ್ರಧಾನಿ ಅವರಿಗೆ ಸರಭ್‌ಜೀತ್ ಪರವಾಗಿ ಕ್ಷಮೆ ಯಾಚನಾ ಅರ್ಜಿ ಸಲ್ಲಿಸುವುದಾಗಿ ಹೇಳಿದ್ದಾರೆ.
ಮಾನವ ಹಕ್ಕು ಮತ್ತು ನ್ಯಾಯದ ಆಧಾರದ ಮೇಲೆ ಸರಭ್ಜೀತ್ ಸಿಂಗ್ ಅವರಿಗೆ ಕ್ಷಮೆ ನೀಡಿ ಗಲ್ಲು ಶಿಕ್ಷೆಯಿಂದ ಪಾರು ಮಾಡಬೇಕು ಎಂದು ಕೇಳಿಕೊಳ್ಳಲಿದ್ದೇನೆ ಎಂದು ಪಿಟಿಐ ಸುದ್ದಿ ಸಂಸ್ಥೆಗೆ ಫೋನ್ ಮೂಲಕ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಸರಭ್‌ಜೀತ್ ಸಿಂಗ್ ಕುಟುಂಬವು ಪಾಕಿಸ್ತಾನಕ್ಕೆ ಗುರುವಾರ ಆಗಮಿಸಿದ್ದು, ಲಾಹೋರ್‍ನ ಕೋಟ್ ಲಖಪತ್ ಜೈಲಿನಲ್ಲಿ ಇರುವ ಸರಭ್‌ಜೀತ್ ಮತ್ತು ಅವನ ಕುಟುಂಬವನ್ನು ಬೇಟಿಗೆ ಅವಕಾಶ ಮಾಡಿಕೊಡುವಂತೆ ಪಂಜಾಬ್ ಪ್ರಾಂತ್ಯದ ಗೃಹ ಇಲಾಖೆಗೆ ತಿಳಿಸಿದ್ದೇನೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
|