ಪಾಕಿಸ್ತಾನದೊಂದಿಗೆ ಅಭಿವೃದ್ದಿಯಾಗಿರುವ ದ್ವಿಪಕ್ಷೀಯ ಸಂಬಂಧಗಳನ್ನು ಇನ್ನಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕಾರ್ಗಿಲ್-ಸ್ಕರ್ದು ಮತ್ತು ಜಮ್ಮು-ಸಿಯಾಲಕೋಟ್ ಮಾರ್ಗಗಳಲ್ಲಿ ಪರ್ಮಿಟ್ ಪದ್ದತಿಯನ್ನು ವಿಸ್ತರಿಸುವುದಕ್ಕೆ ಭಾರತ ಮುಂದಾಗಿದೆ.
ಸಂಸತ್ತಿನಲ್ಲಿ ಭಾರತ-ಪಾಕ್ ನಡುವಿನ ದ್ವಿಪಕ್ಷೀಯ ಸಂಬಂಧಗಳ ಸುಧಾರಣೆಯಲ್ಲಿ ಕೈಗೆತ್ತಿಕೊಳ್ಳಲಾಗಿರುವ ವಿಶ್ವಾಸಭಿವೃದ್ದಿ ಕ್ರಮಗಳ ಕುರಿತು ಮಾಹಿತಿ ನೀಡಿದ ಕೇಂದ್ರ ಗೃಹ ಖಾತೆ ಸಚಿವ ಶಿವರಾಜ್ ಪಾಟೀಲ್ ಅವರು ಶ್ರೀನಗರ-ಮಜಪ್ಪರಾಬಾದ್, ಪೂಂಚ್-ರಾವಲ್‌ಕೋಟ್ ನಡುವೆ ಸಂಚರಿಸುತ್ತಿರುವ ಬಸ್ ಸೇವೆಯನ್ನ ಇನ್ನಷ್ಟು ವಿಸ್ತರಿಸುವುದರ ಜೊತೆಗೆ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಟ್ರಕ್ ಸಾರಿಗೆಗೆ ಒಪ್ಪಿಗೆ ನೀಡುವ ಯೋಜನೆ ಇದೆ ಎಂದು ಅವರು ಹೇಳಿದರು.
ಈ ವಿಚಾರಗಳ ಕುರಿತು ಪಾಕ್ ಸರಕಾರದೊಂದಿಗೆ ಮಾತುಕತೆ ನಡೆಸಲಾಗುವುದು ಅಲ್ಲದೇ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಕ್ರಮಗಳನ್ನು ಭಾರತವು ತನ್ನ ವಿಶ್ವಾಸಭಿವೃದ್ದಿ ಕ್ರಮಗಳಲ್ಲಿ ಅಳವಡಿಸಿಕೊಳ್ಳಲಿದೆ ಎಂದು ಸಂಸತ್ತಿಗೆ ಮಾಹಿತಿ ನೀಡಿದರು.
ದ್ವಿಪಕ್ಷೀಯ ಸಂಬಂಧಗಳ ಸುಧಾರಣೆಯ ನಿಟ್ಟಿನಲ್ಲಿ ಜಾರಿಗೆ ಬಂದಿರುವ ಪರ್ಮಿಟ್ ಪದ್ದತಿಯನ್ನು ವಿಸ್ತರಿಸಲಾಗುವುದು, ಒಂದು ವರ್ಷದ ಅವಧಿಗೆ ನೀಡಲಾಗುವ ಪರ್ಮಿಟ್‌ನಲ್ಲಿ ಮೂರು ಪಾಕಿಸ್ತಾನಕ್ಕೆ ತೆರಳಬಹುದು ಇಲ್ಲವೇ ಆಗಮಿಸಬಹುದು. ಹದಿನೈದು ದಿನಕ್ಕೊಮ್ಮೆ ನಿಗದಿಯಾಗಿರುವ ಶ್ರೀನಗರ-ಮುಜಪ್ಪರಬಾದ್ ಬಸ್ ಸೇವೆಯನ್ನು ವಾರಕ್ಕೆ ಒಂದು ಬಾರಿ ಎಂದು ಮಾರ್ಪಡಿಸಲಾಗಿದೆ. ಎರಡು ದೇಶಗಳ ನಡುವಿನ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಪರ್ಮಿಟ್ ಫಾರ್ಮ್‌ಗಳು ಜಿಲ್ಲಾಧಿಕಾರಿಗಳ ಬಳಿ ದೊರೆಯುವಂತೆ ಸರಕಾರ ಸೌಲಭ್ಯ ಮಾಡಿಕೊಡಲಿದೆ ಎಂದು ಶಿವರಾಜ್ ಪಾಟೀಲ್ ಹೇಳಿದರು.
|