ಅಂತಾರಾಷ್ಟ್ರೀಯ ಸಮುದಾಯದ ಒತ್ತಡಕ್ಕೆ ಸಿಲುಕಿರುವ ಚೀನಾ ಟಿಬೆಟ್‍ನ ಆದ್ಯಾತ್ಮಿಕ ಗುರು ದಲಾಯಿ ಲಾಮಾ ಅವರ ಪ್ರತಿನಿಧಿಯೊಂದಿಗೆ ಮಾತುಕತೆ ಮುಂದುವರಿಸುವುದಾಗಿ ಹೇಳಿದೆ.
ಮಾತುಕತೆಗಳನ್ನು ಪುನರಾರಂಭಿಸುವುದಕ್ಕೆ ದಲಾಯಿ ಲಾಮಾ ಅವರ ಪಕ್ಷವು ಪದೇ ಪದೇ ವಿನಂತಿ ಮಾಡಿಕೊಂಡ ಕಾರಣ ಸಂಬಂಧಪಟ್ಟ ಕೇಂದ್ರ ಸರಕಾರದ ಇಲಾಖೆಯು ದಲಾಯಿ ಲಾಮಾ ಅವರ ಖಾಸಗಿ ಪ್ರತಿನಿಧಿಯನ್ನು ಮಾತುಕತೆ ನಡೆಸುವ ನಿಟ್ಟಿನಲ್ಲಿ ಆಹ್ವಾನ ನೀಡಲಿದೆ ಎಂದು ಕ್ಸಿನುವಾ ಸುದ್ದಿ ಸಂಸ್ಥೆಯು ವರದಿ ಮಾಡಿದೆ.
ಭಾರತದಲ್ಲಿ ಆಶ್ರಯ ಪಡೆದಿರುವ ದಲೈ ಲಾಮಾ ಅವರೊಂದಿಗೆ ಮಾತುಕತೆ ನಡೆಸಲು ಚೀನಾ ಸದಾ ಸಿದ್ಧವಾಗಿದ್ದು, ಆದರೆ ದಲೈ ಲಾಮಾ ಅವರು ಮೊದಲು ಪ್ರತ್ಯೇಕತಾವಾದ ಮತ್ತು ಬೀಜಿಂಗ್ ಒಲಿಂಪಿಕ್ ಕ್ರೀಡಾಕೂಟಕ್ಕೆ ಅಡ್ಡಿ ಪಡಿಸುವುದನ್ನು ಮೊದಲು ನಿಲ್ಲಿಸಬೇಕು. ತೈವಾನ್ ಮತ್ತು ಟಿಬೆಟ್, ಚೀನಾದ ಅವಿಭಾಜ್ಯ ಅಂಗಗಳು ಎಂದು ಚೀನಾ ಪುನರುಚ್ಚಿಸಿದೆ.
ಕಳೆದ ಎರಡು ದಶಕಗಳಿಂದ ಚೀನಾದ ನೀತಿಯನ್ನು ಪ್ರತಿಭಟಿಸುತ್ತ ಬಂದ ಮತ್ತು ಇತ್ತೀಚೆಗೆ ಟಿಬೆಟ್‍ನಲ್ಲಿ ನಡೆದ ಹಿಂಸಾಚಾರಕ್ಕೆ ಕಾರಣರಾದ ದಲೈ ಲಾಮಾ ಅವರು ಟಿಬೆಟ್ ಸ್ವಾತಂತ್ರ್ಯದ ಬೇಡಿಕೆಯನ್ನು ಕೈಬಿಟ್ಟು ಮಾತುಕತೆಗೆ ಮುಂದಾಗಿದ್ದಾರೆ ಎಂದು ಚೀನಾ ಹೇಳಿದೆ.
|