ಪೂರ್ವ ಚೀನಾದ ಶಾಂಡೊಂಗ್ ಪ್ರಾಂತ್ಯದಲ್ಲಿ ಬೆಳಗಿನ ಜಾವ ಎರಡು ರೈಲುಗಳು ಡಿಕ್ಕಿ ಹೊಡೆದ ಪರಿಣಾಮವಾಗಿ 43 ಪ್ರಯಾಣಿಕರು ಸತ್ತು, 247 ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ಅಪಘಾತದ ಮಾಹಿತಿ ನೀಡಿದ್ದಾರೆ. ಬೀಜಿಂಗ್‌ನಿಂದ ಕ್ವಿಂಗಾಡೊ ನಗರಕ್ಕೆ ತೆರಳುತ್ತಿದ್ದ ರೈಲಿನ ಹತ್ತು ಬೋಗಿಗಳು ಮೊದಲು ಹಳಿತಪ್ಪಿ ಎದುರು ದಿಕ್ಕಿನಿಂದ ಬರುತ್ತಿದ್ದ ಯಾನಾಟಿ- ಕ್ಸುವೂ ರೈಲಿಗೆ ಡಿಕ್ಕಿ ಹೊಡೆಯಿತು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ತುರ್ತು ವೈದ್ಯಕೀಯ ಚಿಕಿತ್ಸೆ ನೀಡುತ್ತಿರುವ ತಂಡಗಳು ಎರಡು ರೈಲುಗಳ ಪ್ರಯಾಣಿಕರು ಅಪಾರ ಸಂಖ್ಯೆಯಲ್ಲಿ ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರನ್ನು ಸಮೀಪದ ಜೌಕುನ್ ಆಸ್ಪತ್ರೆಗೆ ಸೇರಿಸಲಾಗಿದೆ. ಪ್ರಮುಖ ರೈಲು ಸಂಚಾರ ಮಾರ್ಗದಲ್ಲಿ ಅಪಘಾತ ಸಂಭವಿಸಿರುವ ಕಾರಣ ಈ ಭಾಗದಲ್ಲಿ ರೈಲು ಸಾರಿಗೆ ವ್ಯತ್ಯಯಗೊಂಡಿದೆ.
ಶಾಂಡೊಂಗ್ ಪ್ರಾಂತ್ಯದಲ್ಲಿ ಪ್ರಸಕ್ತ ವರ್ಷದ ಅವಧಿಯಲ್ಲಿ ಎರಡನೇ ಬಾರಿ ಅಪಘಾತ ಸಂಭವಿಸಿದ್ದು. ಜನವರಿ ತಿಂಗಳಿನಲ್ಲಿ ಹೈಸ್ಪೀಡ್ ರೈಲೊಂದು ರೈಲ್ವೆ ಕಾರ್ಮಿಕರ ಮೇಲೆ ಹಾಯ್ದು ಹೋದ ಪರಿಣಾಮವಾಗಿ 18 ಜನರು ಮೃತಪಟ್ಟು 9 ಕಾರ್ಮಿಕರು ಗಾಯಗೊಂಡಿದ್ದರು.
|