ಪಾಕಿಸ್ತಾನದಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗಲ್ಲು ಶಿಕ್ಷೆಗೆ ಒಳಗಾಗಿರುವ ಭಾರತೀಯ ಮೂಲದ ಸರಭಜಿತ್ ಸಿಂಗ್ ಅವರಿಗೆ ವಿಧಿಸಲಾಗಿದ್ದ ಗಲ್ಲು ಶಿಕ್ಷೆಯನ್ನು ಪಾಕಿಸ್ತಾನ ಸರಕಾರ 21 ದಿನಗಳವರೆಗೆ ಮುಂದೂಡುವ ಮೂಲಕ ಎರಡನೇ ಬಾರಿ ಸರಭಜಿತ್ ಸಿಂಗ್ ಗಲ್ಲು ಶಿಕ್ಷೆ ಮುಂದೂಡಿದಂತಾಗಿದೆ.
ಈ ಮೊದಲು ಏಪ್ರಿಲ್ ಒಂದಕ್ಕೆ ನಿಗದಿಯಾಗಿದ್ದ ಗಲ್ಲು ಶಿಕ್ಷೆಯನ್ನು ಪಾಕಿಸ್ತಾನ ಸರಕಾರ ಒಂದು ತಿಂಗಳವರೆಗೆ ಮುಂದೂಡಿ ಆದೇಶ ಹೊರಡಿಸಿತ್ತು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಲಾಹೋರ್‌ನ ಕೋಟ್ಲಾಪಟ್ ಜೈಲು ಅಧಿಕಾರಿಯೋರ್ವರು ಏಪ್ರಿಲ್ ಮೂವತ್ತಕ್ಕೆ ಮರಣ ದಂಡನೆ ಜಾರಿ ಮಾಡಬೇಕು ಎಂದು ಸರಕಾರದಿಂದ ಈವರೆಗೆ ಆದೇಶ ಬಂದಿಲ್ಲ. ಹೊಸದಾಗಿ ಮರಣ ದಂಡನೆಯ ಶಿಕ್ಷೆಯನ್ನು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು ನೀಡಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.
ಗಲ್ಲು ಶಿಕ್ಷೆಗೆ ಕುರಿತಂತೆ ಸರಭ್‌ಜಿತ್ ಸಹೋದರಿಯು ಪಾಕಿಸ್ತಾನ ಸರಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದು, ಪಾಕಿಸ್ತಾನ ಸರಕಾರವು ಕ್ಷಮೆ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿ, ಸಹೋದರ ಮರಣ ದಂಡನೆಯ ಶಿಕ್ಷೆಯಿಂದ ಮುಕ್ತನಾಗಿ ಬಿಡುಗಡೆಯಾಗುವವರೆಗೆ ತಾನು ಪಾಕಿಸ್ತಾನದಲ್ಲಿ ಇರುವುದಾಗಿ ಹೇಳಿದ್ದಾರೆ.
ಪಾಕಿಸ್ತಾನ ಮುಸ್ಲಿಂ ಲೀಗ್ ನಾಯಕ ನವಾಜ್ ಷರೀಫ್ ಅವರು ಮಾನವಿಯತೆಯ ಆಧಾರದ ಮೇಲೆ ಸರಭ್‌ಜಿತ್ ಅವರನ್ನು ಗಲ್ಲು ಶಿಕ್ಷೆಗೆ ಗುರಿಮಾಡಕೂಡದು ಎಂದು ಕೇಳಿಕೊಂಡ ನಂತರ ಪಾಕ್ ಸರಕಾರವು ಅಲ್ಪಾವಧಿಯವರೆಗೆ ಶಿಕ್ಷೆಯ ಜಾರಿಯನ್ನು ಮುಂದೂಡುವ ತೀರ್ಮಾನ ತೆಗೆದುಕೊಂಡಿದೆ. ಸರಭ್‌ಜಿತ್ ರೀತಿಯಲ್ಲಿ ಭಾರತ ಸರಕಾರವು ಕೂಡ ಪಾಕಿಸ್ತಾನಿ ಪ್ರಜೆಗಳನ್ನು ಜೈಲಿನಿಂದ ಬಿಡುಗಡೆ ಮಾಡಬೇಕು ಎಂದು ನವಾಜ್ ಷರೀಫ್ ಕೇಳಿಕೊಂಡಿದ್ದಾರೆ.
|