ಭಾರತೀಯ ಮೂಲದ ವೈದ್ಯ ಮಹ್ಮದ್ ಹನೀಫ್ ಅವರ ವೀಸಾವನ್ನು ಪುನರ್ ಜಾರಿಗೊಳಿಸಿದ ಆದೇಶದ ಮಾಹಿತಿಯನ್ನು ಮಾಜಿ ವಲಸೆ ಖಾತೆ ಸಚಿವ ಕೆವಿನ್ ಆಂಡ್ರ್ಯೂಸ್ ಅವರು ಆಸ್ಟ್ರೇಲಿಯನ್ ಫೆಡರಲ್ ಪೊಲೀಸರಿಗೆ ನೀಡಿರಲಿಲ್ಲ. ಮಾಹಿತಿಯ ಅಲಭ್ಯತೆಯು ತನಿಖೆಯ ಹಾದಿಗೆ ಎರವಾಗಿ ಪರಿಣಮಿಸಿತು ಎಂದು ಆಸ್ಟ್ರೇಲಿಯನ್ ಮಾಧ್ಯಮಗಳು ಅನಿಸಿಕೆ ವ್ಯಕ್ತಪಡಿಸಿವೆ.
ಹನೀಫ್ ಅವರ ವೀಸಾವನ್ನು ಪುನಃ ಜಾರಿಗೊಳಿಸುವ ಕೇವಿನ್ ಆಂಡ್ರ್ಯೂಸ್ ಆದೇಶವು ವಲಸೆ ಇಲಾಖೆಯ ಅಧಿಕಾರಿಗಳು ಸೇರಿದಂತೆ ಆಸ್ಟ್ರೇಲಿಯನ್ ಫೆಡರಲ್ ಪೊಲೀಸರಿಗೆ ಅಚ್ಚರಿ ತಂದಿತು. ವೀಸಾ ದೊರೆತ ನಂತರ ಹನೀಫ್ ಅವರನ್ನು ಭಾರತಕ್ಕೆ ಮರಳಿ ಕಳುಹಿಸುವ ತೀರ್ಮಾನವು ಕ್ವೀನ್ಸ್ ಲ್ಯಾಂಡ್ ಮತ್ತು ಆಸ್ಟ್ರೇಲಿಯನ್ ಫೆಡರಲ್ ಪೊಲೀಸರ ತನಿಖೆ ಮುಂದುವರಿಯದಂತೆ ಮಾಡಿತು. ಒಂದು ವೇಳೆ ಹನೀಫ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿ ಹನೀಫ್ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದರೆ ಸಾಕ್ಷಿ ಕಲೆ ಹಾಕಲು ಅನುಕೂಲವಾಗುತ್ತಿತ್ತು.
ಜೈಲಿನಿಂದ ಬಿಡುಗಡೆಯಾದ ಹನೀಫ್ ನೇರವಾಗಿ ಸ್ವದೇಶಕ್ಕೆ ಮರಳಿದ ಕಾರಣ ಗ್ಲಾಸ್ಗೊ ವಿಮಾನ ನಿಲ್ದಾಣ ಸ್ಫೋಟಕ್ಕೆ ಸಂಬಂಧಿಸಿದಂತೆ ಸಂಶಯಿತರ ಪಟ್ಟಿಯಲ್ಲಿ ಇದ್ದ ಹನೀಫ್ ವಿರುದ್ಧ ಸಾಕ್ಷಿ ಸಂಗ್ರಹ ಕಾರ್ಯ ಸ್ಥಗಿತಗೊಂಡಿತು ಎಂದು ಆಸ್ಟ್ರೇಲಿಯದ ಏಜ್ ಪತ್ರಿಕೆಯಲ್ಲಿ ಅಭಿಪ್ರಾಯ ಪ್ರಕಟವಾಗಿದೆ.
ಮೊದಲು ಗ್ಲಾಸ್ಗೊ ವಿಮಾನ ನಿಲ್ದಾಣ ಪ್ರಕರಣದಲ್ಲಿ ಸಂಶಯಿತ ಆರೋಪಿಯಾಗಿ ಬಂಧನಕ್ಕೆ ಒಳಗಾದ ಹನೀಫ್ ಆ ಪ್ರಕರಣದಲ್ಲಿ ಜಾಮೀನು ಪಡೆದ ನಂತರ ವೀಸಾ ಇಲ್ಲದ ಕಾರಣ ವಲಸೆ ಇಲಾಖೆ ಅವರನ್ನು ಬಂಧಿಸಿತ್ತು. ಇದೇ ಸಮಯದಲ್ಲಿ ಹನೀಫ್ ಬಂಧನಕ್ಕೆ ಸಂಬಂಧಿಸಿದಂತೆ ರಾಜಕೀಯ ಧುರೀಣರ ವಿವಿಧ ರೀತಿಯ ಅಭಿಪ್ರಾಯಗಳು ಪ್ರಕರಣದ ತನಿಖಾ ಹಾದಿಯನ್ನು ಇನ್ನಷ್ಟು ಜಟೀಲಗೊಳಿಸಿದವು.
|