ಪದಚ್ಯುತಗೊಂಡಿರುವ ನ್ಯಾಯಾಧೀಶರ ಪುನರ್ ನೇಮಕಕ್ಕೆ ಸಂಬಂಧಿಸಿದಂತೆ ಸಮ್ಮಿಶ್ರ ಸರಕಾರದ ಎರಡು ಪಕ್ಷಗಳ ನಡುವೆ ಮಾತುಕತೆ ಅಪೂರ್ಣಗೊಂಡಿದ್ದರೂ, ನ್ಯಾಯಾಂಗೀಯ ವ್ಯವಸ್ಥೆಯಿಂದ ಹೊರಗೆ ಬಿದ್ದಿರುವ ನ್ಯಾಯಾಧೀಶರನ್ನು ಸಂವಿಧಾನ ಬದ್ದವಾಗಿ ನೇಮಕ ಮಾಡಲಾಗುವುದು ಎಂದು ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಮುಖ್ಯಸ್ಥ ಅಸೀಫ್ ಅಲಿ ಜರ್ದಾರಿ ಅವರು ಹೇಳಿದ್ದಾರೆ.
ಒಂದು ವಾರದ ನಂತರ ಪಾಕಿಸ್ತಾನ ಮುಸ್ಲಿಂ ಲೀಗ್ (ಎನ್) ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ನಾಯಕರುಗಳ ನಡುವೆ ಪದಚ್ಯುತಗೊಂಡಿರುವ ನ್ಯಾಯಾಧೀಶರ ಪುನರ್ ನೇಮಕಾತಿ ಸಂಬಂಧ ಅನುಸರಿಸಬೇಕಾದ ಪದ್ದತಿಯ ಬಗ್ಗೆ ಮಾತುಕತೆಗಳು ದುಬೈನಲ್ಲಿ ನಡೆದಿವೆ.
ಪಾಕಿಸ್ತಾನ ಪೀಪಲ್ಸ್ ಪಕ್ಷವು ನ್ಯಾಯಾಧೀಶರನ್ನು ಸಂವಿಧಾನಬದ್ಧವಾಗಿ ನೇಮಕ ಮಾಡಬೇಕು ಎಂದು ಒತ್ತಾಯಿಸುತ್ತಿದ್ದರೆ, ಪಾಕಿಸ್ತಾನ ಮುಸ್ಲಿಂ ಲೀಗ್ ಪಕ್ಷವು ಸಂಸತ್ತಿನಲ್ಲಿ ಮಸೂದೆಯನ್ನು ಅಂಗಿಕರಿಸುವ ಮೂಲಕ ನ್ಯಾಯಾಧೀಶರನ್ನು ಪುನರ್ ನೇಮಕ ಮಾಡಬೇಕು ಎಂದು ವಾದಿಸುತ್ತಿದೆ.
ಪಾಕಿಸ್ತಾನದ ನ್ಯಾಯಾಂಗ ವ್ಯವಸ್ಥೆಯನ್ನು ಸುಧಾರಿಸಬೇಕಾದ ಅನಿವಾರ್ಯತೆ ಇಂದು ಇದ್ದು, ಈ ನಿಟ್ಟಿನಲ್ಲಿ ಸಂವಿಧಾನಬದ್ಧವಾಗಿ ಪದಚ್ಯುತಗೊಂಡಿರುವ ನ್ಯಾಯಾಧೀಶರ ಪುನರ್ ನೇಮಕ ಮತ್ತು ಹಾಗಯೇ ಇತ್ತೀಚೆಗೆ ನೇಮಕವಾಗಿರುವ ನ್ಯಾಯಾಧೀಶರು ಯಥಾರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಅವಕಾಶ ಮಾಡಿಕೊಡಲಾಗುವುದು. ನಾನು ಮತ್ತು ನವಾಜ್ ಷರೀಫ್ ನ್ಯಾಯಾಂಗದ ಬಲಿಪಶುಗಳಾಗಿರುವುದರಿಂದ ನ್ಯಾಯಾಂಗ ಸುಧಾರಣೆಗೆ ಆದ್ಯತೆ ನೀಡುವುದಕ್ಕೆ ಪಿಎಂಎಲ್ ಸಹಕರಿಸುತ್ತದೆ ಎಂದು ಅವರು ಹೇಳಿದ್ದಾರೆ.
|