ಆಸ್ತಿತ್ವಕ್ಕೆ ಬಂದ ಒಂದು ತಿಂಗಳ ಅವಧಿಯಲ್ಲಿ ಪಾಕಿಸ್ತಾನದ ಸಮ್ಮಿಶ್ರ ಸರಕಾರವು ಪತನದ ಹಾದಿಯಲ್ಲಿ ಸಾಗಿದ್ದು, ಪದಚ್ಯುತಗೊಂಡಿರುವ ನ್ಯಾಯಾಧೀಶರನ್ನು ತಕ್ಷಣ ಪುನರ್ ನೇಮಕ ಮಾಡದಿದ್ದಲ್ಲಿ ತಮ್ಮ ಪಕ್ಷದ ಸಚಿವರು ಅಧಿಕಾರ ತ್ಯಜಿಸಲಿದ್ದಾರೆ ಎಂದು ನವಾಜ್ ಷರೀಫ್ ಹೇಳಿಕೆ ನೀಡಿದ್ದಾರೆ.
ನ್ಯಾಯಾಧೀಶರ ಪುನರ್ ನೇಮಕಕ್ಕೆ ಸಂಬಂಧಪಟ್ಟಂತೆ ಮಾಜಿ ಪ್ರಧಾನಿ ನವಾಜ್ ಷರೀಫ್ ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಮುಖ್ಯಸ್ಥ ಅಸೀಫ್ ಅಲಿ ಜರ್ದಾರಿ ದುಬೈನಲ್ಲಿ ಬುಧವಾರ ಮಾತುಕತೆಯನ್ನು ಪುನರಾರಂಭಿಸಲಿದ್ದಾರೆ. ಇಲ್ಲಿಯವರೆಗೆ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಎರಡೂ ಪಕ್ಷಗಳ ನಡುವೆ ನಡೆದ ಮಾತುಕತೆಗಳು ಅಪೂರ್ಣವಾಗಿ ಉಳಿದಿದ್ದು. ಪಿಪಿಪಿ ಸಂವಿಧಾನಬದ್ಧವಾಗಿ ನ್ಯಾಯಾಧೀಶರ ಪುನರ್ ನೇಮಕವಾಗಬೇಕು ಎಂದು ಹೇಳುತ್ತಿದ್ದರೆ, ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ್ ಮುಸ್ಲಿಂ ಲೀಗ್ ಸಂಸತ್ತಿನಲ್ಲಿ ಮಸೂದೆ ಅಂಗಿಕಾರ ಮಾಡುವ ಮೂಲಕ ನ್ಯಾಯಾಧೀಶರ ಪುನರ್ ನೇಮಕವಾಗಬೇಕು ಎಂದು ವಾದಿಸುತ್ತಿದೆ.
ಪರ್ವೇಜ್ ಮುಷರಫ್ ಅವರ ಅಧ್ಯಕ್ಷೀಯ ಆಡಳಿತಾವಧಿಯಲ್ಲಿ ವಜಾಗೊಂಡಿರುವ ನ್ಯಾಯಾಧೀಶರನ್ನು ಪಿಪಿಪಿ ನೇತತ್ವದ ಸರಕಾರ ತಕ್ಷಣ ಪುನರ್ ನೇಮಕ ಮಾಡದಿದ್ದಲ್ಲಿ ಸರಕಾರದಿಂದ ತಾನು ಹಿಂದೆ ಸರಿಯುವುದಾಗಿ ನವಾಜ್ ಷರೀಫ್ ಹೇಳಿದ್ದು, ನ್ಯಾಯಾಧೀಶರ ಪುನರ್ ನೇಮಕವಾಗಬೇಕು ಎನ್ನುವ ಏಕೈಕ ಉದ್ದೇಶದಿಂದ ಸರಕಾರದಲ್ಲಿ ತಾನು ಭಾಗಿಯಾಗಿರುವುದಾಗಿ ಪಿಎಂಎಲ್ (ಎನ್) ಹೇಳಿದೆ.
|