ಇಸ್ಲಾಮಾಬಾದ್ : 2011ರ ಸೆಪ್ಟೆಂಬರ್ 11ರ ಘಟನೆಯ ನಂತರ ಆಲ್‌ಕೈದಾ ನಿಗ್ರಹಕ್ಕಾಗಿ ಅಮೆರಿಕ ಪಾಕಿಸ್ತಾನಕ್ಕೆ ನೀಡಿದ ಮಿಲಿಯನ್‌ಗಟ್ಟಲೆ ಡಾಲರ್ ಅನುದಾನವನ್ನು ರಾಷ್ಟ್ರಾಧ್ಯಕ್ಷ ಮುಷರಫ್ ದುರುಪಯೋಗಪಡಿಸಿಕೊಂಡಿದ್ದಾರೆ ಎನ್ನುವ ಆರೋಪಗಳಲ್ಲಿ ಸತ್ಯಾಂಶವಿಲ್ಲ ಎಂದು ರಾಷ್ಟ್ರಪತಿ ಭವನದ ವಕ್ತಾರರು ಹೇಳಿದ್ದಾರೆ.
ಈ ರೀತಿಯ ಆರೋಪಗಳು ವ್ಯರ್ಥ ಹಾಗೂ ಆಧಾರರಹಿತವಾಗಿವೆ. 2001ರಿಂದ ನಾವು ಇಲ್ಲಿಯವರೆಗೆ ಪಡೆದ ಸಂಪೂರ್ಣ ಮಾಹಿತಿ ಲಭ್ಯವಿವೆ ಎಂದು ವಕ್ತಾರ ರಷೀದ್ ಖುರೇಶಿ ಹೇಳಿದ್ದಾರೆ.
ಅಮೆರಿಕ ಪಾಕಿಸ್ತಾನದ ಸೇನಾಪಡೆಗಳಿಗೆ ಪ್ರತಿ ವರ್ಷ ಉಗ್ರರ ನಿಗ್ರಹಕ್ಕಾಗಿ ನೀಡುತ್ತಿರುವ 1 ಬಿಲಿಯನ್ ಡಾಲರ್ ಹಣವನ್ನು ಸಂಪೂರ್ಣ ವಿನಿಯೋಗಿಸಿಲ್ಲ ಎಂದು ಪಾಕಿಸ್ತಾನ ಪೀಪಲ್ಸ್ ಪಕ್ಷದ ನಾಯಕ ಆಸಿಫ್ ಅಲಿ ಜರ್ದಾರಿ ಬ್ರಿಟನ್‌ನ ಸಂಡೇ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಪಾಕಿಸ್ತಾನಾದ ಸೇನಾಪಡೆಗಳು ಕೇವಲ 250 ರಿಂದ 300 ಮಿಲಿಯನ್ ಡಾಲರ್ ಹಣವನ್ನು ಮಾತ್ರ ಪಡೆಯುತ್ತಿದ್ದು, ಉಳಿದ ಹಣ ಎಲ್ಲಿದೆ ಎಂದು ಜರ್ದಾರಿ ಪ್ರಶ್ನಿಸಿದ್ದಾರೆ.
ಕಳೆದ ಡಿಸೆಂಬರ್ ತಿಂಗಳಿನಲ್ಲಿ ನಡೆದ ಮಾಜಿ ಪ್ರಧಾನಿ ಭುಟ್ಟೋ ಹತ್ಯೆಯ ನಂತರ ಭುಟ್ಟೋ ಪತಿಯಾದ ಆಸಿಫ್ ಅಲಿ ಜರ್ದಾರಿ, ಮಾಜಿ ಪ್ರಧಾನಿ ನವಾಜ್ ಅವರೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬಂದಿದ್ದು ಮುಷರಫ್ ವಿರುದ್ದ ವಾಗ್ದಂಡನೆಯನ್ನು ವಿಧಿಸಲು ನಿರ್ಧರಿಸುವುದಾಗಿ ಜರ್ದಾರಿ ಹೇಳಿದ್ದಾರೆ.
ಮುಂಬರುವ ವಾರದಲ್ಲಿ ವಾಗ್ದಂಡನೆಯನ್ನು ಮಂಡಿಸುವ ಸಾಧ್ಯತೆಗಳಿರುವುದರಿಂದ ಪಾಲುದಾರ ಪಕ್ಷಗಳೊಂದಿಗೆ ಮಾತುಕತೆ ನಡೆಸುತ್ತಿದ್ದು, ಚಾರ್ಜ್‌ಷಿಟ್ ಸಿದ್ದಪಡಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಜೆಟ್ ಹೊಂದಾಣಿಕೆ ಮಾಡಲು ಅಮೆರಿಕದಿಂದ ಬಂದ ಅನುದಾನದ ಹಣವನ್ನು ಬಜೆಟ್‌ನಲ್ಲಿ ಹೊಂದಾಣಿಕೆ ಮಾಡಲಾಗಿದೆ ಎನ್ನುವುದು ಉತ್ತರವಲ್ಲ. ಪ್ರತಿ ವರ್ಷ 700 ಮಿಲಿಯನ್ ಡಾಲರ್ ಹಣ ದುರುಪಯೋಗವಾಗಿದ್ದು, ಉಳಿದ ಹಣವನ್ನು ಮುಷರಫ್ ಯಾವ ಯೋಜನೆಗಳಿಗೆ ಬಳಸಿಕೊಂಡಿದ್ದಾರೆ ಎನ್ನುವುದನ್ನು ನಾವು ಪತ್ತೆ ಮಾಡಬೇಕಾಗಿದೆ ಎಂದು ಜರ್ದಾರಿ ಹೇಳಿದ್ದಾರೆ.
|