ನಾರ್ಥ್ ವೆಸ್ಟ್ ಫ್ರೆಂಟೈಯರ್ ಪ್ರಾಂತ್ಯದ ಶಾಸನಸಭೆಯು ಅಧ್ಯಕ್ಷ ಪರ್ವೇಜ್ ಮುಷರಫ್ ವಿರುದ್ಧ ಗೊತ್ತುವಳಿ ಪಾಸು ಮಾಡಿದ್ದು, ಇದು ಅಧ್ಯಕ್ಷರ ಪದಚ್ಯುತಿಗಾಗಿ ಆಡಳಿತಾರೂಢ ಮೈತ್ರಿಕೂಟ ನಡೆಸುತ್ತಿರುವ ಕಾರ್ಯಗಳಲ್ಲಿ ಎಡನೇ ಬೃಹತ್ ನಡೆಯಾಗಿದೆ.
ಪಂಜಾಬ್ ಪ್ರಾಂತ್ಯದಂತೆ, ನಾರ್ಥ್ ವೆಸ್ಟ್ ಫ್ರೆಂಟೈಯರ್ ಪ್ರಾಂತ್ಯದ ಶಾಸನ ಸಭೆಯಲ್ಲೂ ಕೂಡ ಮಸೂದೆಯನ್ನು ಪಾಸು ಮಾಡಲಾಯಿತು. ಪಂಜಾಬಿನಂತೆ ಇಲ್ಲಿಯೂ 107-4ರ ಭಾರೀ ಬಹುಮತದೊಂದಿಗೆ ಗೊತ್ತುವಳಿಯನ್ನು ಪಾಸು ಮಾಡಲಾಗಿದೆ.
ರಾಷ್ಟ್ರಾಧ್ಯಕ್ಷ ಪರ್ವೇಜ್ ಮುಷರಫ್ 1999ರಲ್ಲಿ ಕ್ಷಿಪ್ರಕ್ರಾಂತಿ ಮೂಲಕ ಅಧಿಕಾರಕ್ಕೆ ಬಂದಿದ್ದು ವರ್ಷಗಳ ಕಾಲ ರಾಷ್ಟ್ರವನ್ನು ಆಳಿದ್ದರು. ದೇಶದಲ್ಲಿ ತುರ್ತುಸ್ಥಿತಿಯನ್ನು ಹೇರಿ ನ್ಯಾಯಾಧೀಶರನ್ನು ಅಮಾನತುಗೊಳಿಸಿದ ನಂತರ ಇವರ ಅಪಕೀರ್ತಿ ಹೆಚ್ಚಾಗಿತ್ತು.
ಫೆಬ್ರವರಿಯಲ್ಲಿ ನಡೆದ ಮಹಾ ಚುನಾವಣೆಯಲ್ಲಿ ಇವರ ವಿರೋಧಿಗಳು ಅಧಿಕಾರ ವಹಿಸಿಕೊಂಡಿದ್ದು, ಇವರನ್ನು ಬದಿಗೆ ಸರಿಸಲಾಗಿದೆ. ಇದೀಗ ಇವರ ವಿರುದ್ಧ ರಾಜಕೀಯ ಪಕ್ಷಗಳು ವಾಗ್ದಂಡನೆಯನ್ನು ವಿಧಿಸಲು ಸಿದ್ದರಾದರೂ ಅಧಿಕಾರವನ್ನು ತ್ಯಜಿಸುವುದಿಲ್ಲ ಎನ್ನುತ್ತಾ ಕುರ್ಚಿಗಂಟಿಕೊಂಡಿದ್ದಾರೆ.
|