ಲಾಹೋರ್‌ನ ಪೂರ್ವ ಭಾಗದಲ್ಲಿ ಪೊಲೀಸರನ್ನು ಗುರಿಯಾಗಿಸಿಕೊಂಡು ನಡೆಸಿದ ಆತ್ಮಹತ್ಯಾ ದಾಳಿಯಲ್ಲಿ ಇಬ್ಬರು ಪೊಲೀಸರು ಸೇರಿದಂತೆ ಏಳು ಮಂದಿ ಸಾವನ್ನಪ್ಪಿದ್ದು, 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
61ನೇ ಸ್ವಾತಂತ್ರ್ಯ ದಿನಾಚರಣೆಯ ಸಿದ್ಧತೆ ನಡೆಸುತ್ತಿರುವ ರಾತ್ರಿಯ ವೇಳೆಯಲ್ಲಿ ನಗರದ ಇಕ್ಬಾಲ್ ಟೌನ್ ಪ್ರದೇಶದ ಜನನಿಬಿಡ ಮಾರುಕಟ್ಟೆಯ ಪೊಲೀಸ್ ಠಾಣೆಯ ಬಳಿ ಸ್ಫೋಟ ಸಂಭವಿಸಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಯುವಕನೊಬ್ಬ ಪೊಲೀಸರ ಬಳಿ ಬಂದು ತನ್ನನ್ನು ತಾನು ಸ್ಫೋಟಿಸಿಕೊಂಡಾಗ ಈ ಘಟನೆ ಸಂಭವಿಸಿತು ಎಂದು ತನಿಖಾ ದಳದ ಉಪಮಹಾನಿರ್ದೇಶಕ ಮುಸ್ತಾಖ್ ಸುಖೇರಾ ತಿಳಿಸಿದ್ದಾರೆ.
ಬಾಂಬ್‌ಸ್ಫೋಟದಲ್ಲಿ ಐವರು ನಾಗರಿಕರು ಹಾಗೂ ಇಬ್ಬರು ಭದ್ರತಾ ಪಡೆಗಳ ಸೈನಿಕರು ಸಾವನ್ನಪ್ಪಿದ್ದು, 12 ಪೊಲೀಸರು ಸೇರಿದಂತೆ 16 ಮಂದಿ ಗಾಯಗೊಂಡಿದ್ದಾರೆ ಎಂದು ಮುಸ್ತಾಖ್ ತಿಳಿಸಿದ್ದಾರೆ.
ದಕ್ಷಿಣ ವಜೀರಿಸ್ತಾನದ ಬಾಘರ್ ಗ್ರಾಮದಲ್ಲಿ ತಾಲಿಬಾನ್ ಪರ ಕಮಾಂಡರ್ ಮುಲ್ಲಾ ನಜೀರ್ ಅವರನ್ನು ಗುರಿಯಾಗಿಸಿಕೊಂಡು ನಡೆಸಿದ ಬಹು ಕ್ಷಿಪಣಿ ದಾಳಿಯಲ್ಲಿ , ಶಂಕಿತ ಅಲ್-ಖೈದಾ ಉಗ್ರಗಾಮಿಗಳು ಸೇರಿದಂತೆ 10 ಮಂದಿ ಸಾವನ್ನಪ್ಪಿದ ಘಟನೆ ನಡೆದ ಕೆಲ ಗಂಟೆಗಳ ನಂತರ ಈ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗಿದೆ.
|