ಪಾಕಿಸ್ತಾನ ಅಧ್ಯಕ್ಷ ಪರ್ವೇಜ್ ಮುಷರಫ್ ಕೊನೆಗೂ ಸ್ಥಾನತ್ಯಾಗಕ್ಕೆ ನಿರ್ಧರಿಸಿದ್ದಾರೆ. ವಾಗ್ದಂಡನೆ ಎದುರಿಸುವ ಬದಲಿಗೆ ತಾನಾಗಿಯೇ ಅವರು ಅಧ್ಯಕ್ಷ ಪದವಿಯಿಂದ ಕೆಳಗಿಳಿಯಲು ಮುಂದಾಗಿದ್ದಾರೆ.
ವ್ಯವಸ್ಥೆಗೆ ವಿರುದ್ಧವಾಗಿ ಹೋಗಲು ತಾನು ಇಚ್ಛಿಸುವುದಿಲ್ಲ ಎಂಬುದಾಗಿ ಅವರು ತನ್ನ ನಿಕಟವರ್ತಿಗಳಿಗೆ ಬುಧವಾರ ಸಾಯಂಕಾಲ ಹೇಳಿದ್ದರು ಎಂಬುದಾಗಿ ಸ್ಥಳೀಯ ಇಂಗ್ಲೀಷ್ ದೈನಿಕ ದಿ ನ್ಯೂಸ್ ಉಲ್ಲೇಖಿಸಿದೆ.
ಅಧಿಕಾರದಲ್ಲಿರುವ ಸರಕಾರದೊಂದಿಗೆ ಮುನ್ನಡೆಯುವುದು ಸಾಧ್ಯವಿಲ್ಲ ಮತ್ತು ಪ್ರಸ್ತುತ ಪರಿಸ್ಥಿತಿಯಲ್ಲಿ ಮುಂದುವರಿದರೆ ಅದು ರಾಷ್ಟ್ರೀಯ ಹಿತಾಸಕ್ತಿಗಳಿಗೆ ಧಕ್ಕೆ ಉಂಟುಮಾಡಲಿದೆ ಎಂಬುದು ಅವರಿಗೆ ಮನವರಿಕೆಯಾಗಿದೆ ಎಂದು ಮೂಲಗಳು ಹೇಳಿವೆ.
ತನ್ನಪರ ಇರುವವರ ಸಂಖ್ಯೆ ಕೇವಲ ಬೆರಳೆಣಿಕೆಯಾಗಿದ್ದು, ಹುದ್ದೆಯಲ್ಲಿನ ಉಳಿವು ಕಷ್ಟಸಾಧ್ಯ ಹಾಗೂ, ವಾಗ್ದಂಡನೆಯಿಂದ ಸ್ಥಾನ ತ್ಯಜಿಸಿದರೆ, ತನಗೆ ಯಾವ ಸವಲತ್ತೂ ಲಭಿಸಲಾರದು ಎಂಬುದು ತಿಳಿದಿರುವ ಮುಷರಫ್ ಈ ನಿರ್ಧಾರಕ್ಕೆ ಬಂದಿದ್ದಾರೆನ್ನಲಾಗಿದೆ.
ಒಂದೊಮ್ಮೆ ಅವರು ಸ್ಥಾನ ತ್ಯಜಿಸಿದ ತಕ್ಷಣ ರಾಷ್ಟ್ರದಲ್ಲೇ ಉಳಿಯ ಬಯಸಿದಲ್ಲಿ, ಅವರ ವೈಯಕ್ತಿಕ ಭದ್ರತೆಯ ಅರಿವೂ ಅವರಿಗೆ ಇದೆ. ಅವರು ರಾಷ್ಟ್ರವನ್ನು ತಕ್ಷಣವೇ ತ್ಯಜಿಸಿದಲ್ಲಿ ಅವರು ಯಾವಾಗ ಬೇಕಿದ್ದರೂ ರಾಷ್ಟ್ರಕ್ಕೆ ಮರಳಲು ಅವಕಾಶ ಲಭಿಸಲಿದೆ ಎಂಬುದೂ ಅಧ್ಯಕ್ಷರಿಗೆ ಅರಿವಿದೆ.
|