ಸುದೀರ್ಘ ಕಾಲೀನ ಅಣುವ್ಯಾಪಾರ ಮಾನದಂಡದಿಂದ ಭಾರತವನ್ನು ಹೊರಗಿಡುವ ಅಮೆರಿಕದ ಪ್ರಸ್ತಾಪವನ್ನು ತಿರಸ್ಕರಿಸಬೇಕು ಎಂದು ಅಣ್ವಸ್ತ್ರ ಪ್ರಸರಣ ವಿರೋಧಿ ತಜ್ಞರು ಮತ್ತು ಸರಕಾರೇತರ ಸಂಸ್ಥೆಗಳು, ಅಣುಪೂರೈಕೆ ಸಮೂಹದ (ಎನ್ಎಸ್‌ಜಿ) ರಾಷ್ಟ್ರಗಳ ವಿದೇಶಾಂಗ ಸಚಿವರನ್ನು ಕೋರಿದ್ದಾರೆ.
ಸುಮಾರು ಎರಡು ಡಜನ್ ರಾಷ್ಟ್ರಗಳ 150ಕ್ಕೂ ಹೆಚ್ಚು ಅಣ್ವಸ್ತ್ರಪ್ರಸರಣ ತಡೆ ತಜ್ಞರು ಮತ್ತು ಸರಕಾರೇತರ ಸಂಸ್ಥೆಗಳು ಎನ್ಎಸ್‌ಜಿ ರಾಷ್ಟ್ರಗಳ ವಿದೇಶಾಂಗ ಸಚಿವರಿಗೆ ಬರೆದಿರುವ ಪತ್ರದಲ್ಲಿ ಈ ಒತ್ತಾಯ ಮಾಡಿದ್ದಾರೆ.
45 ಸದಸ್ಯ ರಾಷ್ಟ್ರಗಳ ಎನ್‌ಎಸ್‌ಜಿಯು ಮುಂದಿನ ವಾರ ವಿಯೆನ್ನಾದಲ್ಲಿ ಸಭೆ ಸೇರಲಿದೆ. ಅಣು ವ್ಯಾಪಾರದ ಮಾನದಂಡವನ್ನು ಭಾರತದ ಮಟ್ಟಿಗೆ ಸಡಿಲಿಸುವಂತೆ ಅಮೆರಿಕವು ಎನ್ಎಸ್‌ಜಿ ರಾಷ್ಟ್ರಗಳಿಗೆ ಹೇಳಿದೆ.
ಭಾರತ-ಅಮೆರಿಕ ಅಣು ಒಪ್ಪಂದವನ್ನು ವಿರೋಧಿಸುತ್ತಲೇ ಬಂದಿರುವ ಶಸ್ತ್ರಾಸ್ತ್ರ ನಿಯಂತ್ರಣ ಸಂಘಟನೆಯ ನೇತೃತ್ವದಲ್ಲಿ ಈ ಪತ್ರವನ್ನು ಕಳುಹಿಸಲಾಗಿದೆ.
"ಇತರ 178 ರಾಷ್ಟ್ರಗಳಂತೆ ಭಾರತವು ಸಮಗ್ರ ಅಣ್ವಸ್ತ್ರ ಪರೀಕ್ಷೆ ನಿಷೇಧಕ್ಕೆ(ಸಿಟಿಬಿಟಿ) ಸಹಿಹಾಕಿಲ್ಲ. ಅದು ತನ್ನ ಅಣ್ವಸ್ತ್ರ ತಯಾರಿಯನ್ನು ಮುಂದುವರಿಸಲು ಫಿಸೈಲ್ ವಸ್ತುಗಳ ಉತ್ಪಾದನೆಯನ್ನು ಮುಂದುವರಿಸಿದೆ. ಅಣ್ವಸ್ತ್ರ ಪ್ರಸರಣ ತಡೆ ಒಪ್ಪಂದಕ್ಕೆ ಸಹಿಹಾಕದ ಕೇವಲ ಮೂರು ರಾಷ್ಟ್ರಗಳಲ್ಲಿ ಒಂದಾಗಿರುವ ಭಾರತವು ಪರಮಾಣು ನಿಶ್ಶಸ್ತ್ರೀಕರಣದ ಗುರಿಯನ್ನು ತಲುಪುವ ಕುರಿತು ಕಾನೂನು ರೀತ್ಯಾ ಬದ್ಧವಾಗಿಲ್ಲ" ಎಂದು ಪತ್ರದಲ್ಲಿ ಹೇಳಲಾಗಿದೆ.
|