ಮಲೇಶ್ಯಾದ ಪ್ರಮುಖ ವಿಪಕ್ಷ ನಾಯಕ ಅನ್ವರ್ ಇಬ್ರಾಹಿಂ ಅವರು ಸಂಸತ್ ಉಪಚುನಾವಣೆಗೆ ಶನಿವಾರ ನಾಮಪತ್ರ ಸಲ್ಲಿಸಿದ್ದಾರೆ.
ಆಡಳಿತಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಿ, ತಾನು ಅಧಿಕಾರಕ್ಕೇರಲು ಉತ್ಸುಕರಾಗಿರುವ ಅವರು, ಇದರ ಮೊದಲ ಹೆಜ್ಜೆಯೆಂಬಂತೆ ನಾಮಪತ್ರ ಸಲ್ಲಿಸಿದ್ದು, ಈ ವೇಳೆ ಅವರ ಸಾವಿರಾರು ಬೆಂಬಲಿಗರು ಉಪಸ್ಥಿತರಿದ್ದರು. ಉತ್ತರದ ರಾಜ್ಯ ಪೆನಾಂಗ್ ಕ್ಷೇತ್ರಕ್ಕೆ ಆಗಸ್ಟ್ 26ರಂದು ಚುನಾವಣೆ ನಡೆಯುತ್ತಿದ್ದು, ಅನ್ವರ್ ಸ್ಫರ್ಧೆಗೆ ಮುಂದಾಗಿದ್ದಾರೆ.
ಇತ್ತೀಗೆ ಸಲಿಂಗಕಾಮ ಆಪಾದನೆಗೆ ಒಳಗಾಗಿದ್ದರೂ, ತಮ್ಮ ನಾಯಕನ ಮೇಲೆ ಜನಪ್ರಿಯತೆ ಕುಗ್ಗಿಲ್ಲ ಎಂಬುದನ್ನು ಅಲ್ಲಿ ಜಮಾಯಿಸಿದ್ದ ಅವರ ಬೆಂಬಲಿಗರ ಸಂಖ್ಯೆ ಹೇಳುತ್ತಿತ್ತು. ಅನ್ವರ್ ತನ್ನ 23ರ ಹರೆಯದ ಸಹಚರನೊಬ್ಬನನ್ನು ಸಲಿಂಗ ಕಾಮಕ್ಕೆ ಬಳಸಿಕೊಂಡಿದ್ದಾರೆ ಎಂದು ಇತ್ತೀಚೆಗೆ ಆಪಾದಿಸಲಾಗಿತ್ತು.
61ರ ಹರೆಯದ ಅನ್ವರ್ ಅವರು ಈ ಹಿಂದೆಯೂ ಇಂತಹುದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಆಪಾದನೆಗೊಳಗಾಗಿದ್ದು, 1998ರಲ್ಲಿ ಅವರಿಗೆ ಜೈಲು ಶಿಕ್ಷೆ ವಿಧಿಸಲಾಗಿತ್ತು. ಆದರೆ, ಈ ಎರಡೂ ಪ್ರಕರಣಗಳನ್ನೂ ತನ್ನ ವಿರುದ್ಧ ಹೂಡಲಾಗಿರುವ ರಾಜಕೀಯ ಸಂಚು ಎಂದು ಹೇಳಿರುವ ಅನ್ವರ್ ತಾನು ಪ್ರಧಾನಿಯಾಗುವುದನ್ನು ತಪ್ಪಿಸಲು ಮಾಡಿರುವ ಫಿತೂರಿ ಇದೆಂದು ಆಪಾದನೆಗಳನ್ನು ತಳ್ಳಿಹಾಕಿದ್ದಾರೆ.
1957ರಲ್ಲಿ ರಾಷ್ಟ್ರವು ಸ್ವತಂತ್ರವಾದಂದಿನಿಂದ ಅಧಿಕಾರದಲ್ಲಿರುವ ರಾಷ್ಟ್ರೀಯ ರಂಗದ ಮೈತ್ರಿಕೂಟವನ್ನು ಅಧಿಕಾರದಿಂದ ಕೆಳಗಿಳಿಸಲು ಪ್ರಯತ್ನಿಸುತ್ತಿದ್ದಾರೆ.
ನಾಮಪತ್ರ ಸಲ್ಲಿಕೆ ವೇಳೆ ಜಮಾಯಿಸಿದ್ದ ಅಭಿಮಾನಿಗಳಲ್ಲಿ ಹೆಚ್ಚಿನವರು ಅನ್ವರ್ ಅವರ ಮುಖವಾಡ ಧರಿಸಿದ್ದು, ಚೆಂಡೆ ವಾದ್ಯಘೋಷಗಳೊಂದಿಗೆ ಮಲೇಶ್ಯಾ ಭಾಷೆಯಲ್ಲಿ 'ಸುಧಾರಣೆ' ಎಂಬ ಘೋಷಣೆಗಳನ್ನು ಕೂಗುತ್ತಿದ್ದರು.
ಅನ್ವರ್ ವಿರುದ್ಧ ಆಡಳಿತ ಪಕ್ಷದ ಆರಿಫ್ ಶಾ ಒಮರ್ ಶಾ ಸ್ಫರ್ಧಿಸುತ್ತಿದ್ದಾರೆ.
|