ಪಾಕಿಸ್ತಾನದ ಸಮ್ಮಿಶ್ರ ಸರಕಾರದಲ್ಲಿನ ಒಮ್ಮತ ಮೂಡಿದ ನಂತರವೇ ಅಧ್ಯಕ್ಷ ಸ್ಥಾನದ ಕುರಿತಾಗಿ ನಿರ್ಧಾರ ಕೈಗೊಳ್ಳುವುದಾದರೂ, ಮುಂದಿನ ಪಾಕಿಸ್ತಾ ಅಧ್ಯಕ್ಷ ಸ್ಥಾನಕ್ಕೆ ಮಹಿಳೆಯನ್ನು ಆಯ್ಕೆ ಮಾಡುವ ಸಂಭವವಿದೆ ಎಂದು ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಆಸಿಫ್ ಅಲಿ ಜರ್ದಾರಿ ತಿಳಿಸಿದ್ದಾರೆ.
ಮುಷರಫ್ ಅವರ ರಾಜೀನಾಮೆಯ ನಂತರ ರಾಷ್ಟ್ರೀಯ ರಾಜಕೀಯ, ವಿದೇಶಿ ನೀತಿಗಳಲ್ಲಿ ಬದಲಾವಣೆ ಮಾಡುವುದಾಗಿ ತಿಳಿಸಿದ ಜರ್ದಾರಿ, ದೇಶೀಯ ಸಮಸ್ಯೆಗಳನ್ನು ಬಗೆಹರಿಸಲು ಭಾರತ, ಅಫಘಾನಿಸ್ತಾನ, ಇರಾನ್ ಮತ್ತು ಅರಬ್ ರಾಷ್ಟ್ರಗಳೊಂದಿಗೆ ಸಮಾವೇಶ ನಡೆಸುವ ಯೋಜನೆಯನ್ನು ಹೊಂದುವುದಾಗಿ ಸೂಚಿಸಿದ್ದಾರೆ.
ಪಾಕಿಸ್ತಾನ ಪೀಪಲ್ಸ್ ಪಾರ್ಟಿ ನೇತೃತ್ವದ ಸರಕಾರದ ವಿರುದ್ಧ ಮುಷರಫ್ ಪಿತೂರಿ ನಡೆಸುತ್ತಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಪಾಕಿಸ್ತಾನ ಅಧ್ಯಕ್ಷ ಪರ್ವೇಜ್ ಮುಷರಫ್ ಅವರ ಮೇಲೆ ದೋಷಾರೋಪಣೆ ಮಾಡುವ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಮುಷರಫ್ ಅವರ ಸ್ಥಾನವನ್ನು ಮಹಿಳಾ ಅಭ್ಯರ್ಥಿಯೊಬ್ಬರನ್ನು ಸಮ್ಮಿಶ್ರ ಸರಕಾರವು ಆಯ್ಕೆ ಮಾಡಲಿದೆ ಎಂದು ಜರ್ದಾರಿ ಸ್ಪಷ್ಟಪಡಿಸಿದ್ದಾರೆ.
ಈ ನಡುವೆ, ತಾನು ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆಯನ್ನು ತಳ್ಳಿಹಾಕಿರುವ ಜರ್ದಾರಿ, ನಾನು ಅಧ್ಯಕ್ಷನಾಗಲು ಒಂದು ವೇಳೆ ಬಯಸಿದ್ದಲ್ಲಿ, ಈಗಾಗಲೇ ಪ್ರಧಾನಮಂತ್ರಿಯಾಗಲೂಬಹುದಿತ್ತು ಎಂದು ಹೇಳಿದ್ದಾರೆ.
|