ಕಾಠ್ಮಂಡು: ಅರಸೊತ್ತಿಗೆಯ ಅವಸಾನದ ಬಳಿಕ, ಪ್ರಜಾತಂತ್ರ ನೇಪಾಳದ ಪ್ರಥಮ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳಲು ಮಾಜಿ ಗೆರಿಲ್ಲಾ ನಾಯಕ ಪ್ರಚಂಡ ಸರ್ವಸಿದ್ಧತೆ ನಡೆಸಿದ್ದಾರೆ. ಆದರೆ ಖಾತೆ ಹಂಚಿಕೆ ವಿಚಾರದಲ್ಲಿ ಮೈತ್ರಿ ಪಕ್ಷದೊಳಗೆ ಒಮ್ಮತ ಮೂಡಿಲ್ಲ ಎಂದು ಹೇಳಲಾಗಿದೆ.
ನೇಪಾಳ ಅಧ್ಯಕ್ಷ ರಾಮ್ ಬರನ್ ಯಾದವ್ ಅವರು ಶೀತಲ್ ನಿವಾಸದ ರಾಷ್ಟ್ರಪತಿ ಭವನದಲ್ಲಿ ಪ್ರಮಾಣವಚನ ಸ್ವೀಕರಿಸಲು ಪ್ರಚಂಡರಿಗೆ ಆಹ್ವಾನ ನೀಡಿದ್ದಾರೆ.
ಶುಕ್ರವಾರ ಮತ್ತು ಶನಿವಾರ ಸತತ ಎರಡುದಿನಗಳ ಕಾಲ ನಡೆದ ಸಭೆಯಲ್ಲಿ ಮೂರು ಪ್ರಮುಖ ಪಕ್ಷಗಳಾದ ಸಿಪಿಎನ್ ಮಾವೋವಾದಿ, ಸಿಪಿಎನ್-ಯುಎಂಎಲ್ ಮತ್ತು ಮಾದೇಶಿ ಪಕ್ಷಗಳು ಸಮ್ಮಿಶ್ರ ಸರಕಾರದ ಸಾಮಾನ್ಯ ಕನಿಷ್ಠ ಕಾರ್ಯಕ್ರಮನ್ನು ರೂಪಿಸಿದ್ದಾರೆ. ಅದಲ್ಲದೆ, ಹೊಸ ಸಂಪುಟದ ನೀತಿ ಸಂಹಿತೆಯೊಂದನ್ನೂ ರಚಿಸಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.
ಅದಾಗ್ಯೂ, ಮೈತ್ರಿಕೂಟವು ಖಾತೆ ಹಂಚಿಕೆ ವಿಚಾರವನ್ನು ಅಂತಿಮಗೊಳಿಸುವಲ್ಲಿ ವಿಫಲವಾಗಿದ್ದು ಭಾನುವಾರ ಸಮಾನ ಆಧಾರದ ಮೇಲೆ ಸಮಸ್ಯೆ ಪರಿಹರಿಸಿಕೊಳ್ಳಲು ಯತ್ನಿಸಿದ್ದಾರೆ.
ಸೋಮವಾರದ ಪ್ರಮಾಣವಚನ ಕಾರ್ಯಕ್ರಮದ ಬಳಿಕ ಸಂಪುಟ ರಚನೆ ಮಾಡಲಾಗುವುದು ಎಂದು ಮಾವೋವಾದಿಗಳ ದ್ವಿತೀಯ ಸ್ತರದ ನಾಯಕ ಬಾಬುರಾಮ್ ಭಟ್ಟಾರೈ ಹೇಳಿದ್ದಾರೆ.
ಇದರಿಂದಾಗಿ ಬಹುಮತದ ಕೊರತೆಯಿಂದ ಏಪ್ರಿಲ್ ತಿಂಗಳಲ್ಲಿ ನಡೆದ ಮಹಾ ಚುನಾವಣೆಯ ಬಳಿಕ ಸರಕಾರ ರಚನೆಗೆ ಉಂಟಾಗಿದ್ದ ಅಡ್ಡಿಗೆ ತೆರವುಂಟಾದಂತಾಗಿದೆ.
|