ಪಾಕಿಸ್ತಾನದಲ್ಲೀಗ ವೈರತ್ವದ ರಾಜಕೀಯ ಆರಂಭವಾಗಿದೆ,ಆದರೆ ನನ್ನ ವಿರುದ್ಧದ ಯಾವುದೇ ಆರೋಪವನ್ನು ಸಾಬೀತುಪಡಿಸಲು ಸಾಧ್ಯವಿಲ್ಲ ಎಂಬುದಾಗಿ ಪಾಕ್ ನಿರ್ಗಮನ ಅಧ್ಯಕ್ಷ ಪರ್ವೇಜ್ ಮುಷರಪ್ ಅವರು ಪಾಕ್ ಸಮ್ಮಿಶ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಕಳೆದ 9ವರ್ಷಗಳಲ್ಲಿ ಪಾಕಿಸ್ತಾನದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ಸಂದರ್ಭದಲ್ಲಿ ಮುಷರಫ್ ಅವರು ಹಲವಾರು ಕಾನೂನು ಬಾಹಿರ ಕ್ರಮಗಳನ್ನು ಕೈಗೊಂಡಿದ್ದಾರೆ ಎಂಬ ಆರೋಪದ ಮೇಲೆ ನೂತನ ಸಮ್ಮಿಶ್ರ ಸರ್ಕಾರ ಮುಷ್ ವಿರುದ್ಧ ವಾಗ್ದಂಡನೆ ವಿಧಿಸಿದ ಬೆನ್ನಲ್ಲೇ, ಸೋಮವಾರ ರಾಷ್ಟ್ರದ ಜನತೆಯನ್ನು ಉದ್ದೇಶಿಸಿ ಸುಮಾರು 75ನಿಮಿಷಗಳ ಕಾಲ ಮಾತನಾಡಿದ ಮುಷರಫ್ ಅವರು ತಮ್ಮ ಅಭಿಪ್ರಾಯವನ್ನು ದೇಶದ ಜನತೆ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟರು.
ತಾನು ದೇಶದ ಅಧ್ಯಕ್ಷನಾಗಿ 9ವರ್ಷಗಳ ಕಾರ್ಯನಿರ್ವಹಿಸುವ ಮೂಲಕ,ಪಾಕಿಸ್ತಾನದ ಅಭಿವೃದ್ದಿಗಾಗಿ ಪ್ರಾಮಾಣಿಕವಾಗಿ ಶ್ರಮಿಸಿ ದ್ದೇನೆ. ಕಳೆದ ಎರಡು ವರ್ಷಗಳ ಹಿಂದೆ ಪಾಕಿಸ್ತಾನವನ್ನು ಭಯೋತ್ಪಾದನಾ ರಾಷ್ಟ್ರವೆಂದು ಕರೆಯಲಾಗುತ್ತಿದ್ದು,ಆದರೆ ನಾನು ಕಠಿಣ ಕ್ರಮಗಳನ್ನು ಕೈಗೊಳ್ಳುವ ಮೂಲಕ ಭಯೋತ್ಪಾದನೆಯನ್ನು ಹತ್ತಿಕ್ಕುವ ಕ್ರಮ ಕೈಗೊಂಡಿದ್ದೇನೆ.
ಅಲ್ಲದೇ ನಾನು ಯಾವತ್ತೂ ಪ್ರಜಾಪ್ರಭುತ್ವ ವಿರೋಧಿಯಾಗಿರಲಿಲ್ಲ, ಆ ಕಾರಣಕ್ಕಾಗಿಯೇ ಮುಕ್ತ ಚುನಾವಣೆಗೆ ಅವಕಾಶ ಮಾಡಿಕೊಟ್ಟಿದ್ದೇನೆ ಎಂದು ಮುಷರಪ್ ಈ ಸಂದರ್ಭದಲ್ಲಿ ಹೇಳಿದರು.
ಪಾಕ್ ಕಳೆದ 9ವರ್ಷಗಳ ಹಿಂದೆ ಯಾವ ಸ್ಥಿತಿಯಲ್ಲಿ ಇತ್ತೆಂಬುದನ್ನು ನೀವೇ ಗಮನಿಸಿದ್ದೀರಿ, ಇದೀಗ ಒಂಬತ್ತು ವರ್ಷಗಳ ಬಳಿಕ ಪಾಕಿಸ್ತಾನ ಬಹಳಷ್ಟು ಅಭಿವೃದ್ದಿ ಸಾಧಿಸಿದೆ ಎಂದು ಹೆಮ್ಮೆಯಿಂದ ಹೇಳಬಲ್ಲೆ.
ದೇಶದಲ್ಲಿ ಶೇ.34ರಷ್ಟಿದ್ದ ಉದ್ಯೋಗ ಸಮಸ್ಯೆಯನ್ನು ಶೇ.24ಕ್ಕೆ ಇಳಿದಿದೆ, ಅಲ್ಲದೇ ಪ್ರತಿಯೊಂದು ಕ್ರಮಕೈಗೊಳ್ಳು ಮುನ್ನ ಕಾನೂನು ಸಮ್ಮತವಾಗಿಯೇ ಕೈಗೊಂಡಿರುವುದಾಗಿ ತಮ್ಮ ನಿಲುವನ್ನು ಸಮರ್ಥಿಸಿಕೊಂಡರು.
ಮುಷ್ ಜೆಡ್ಡಾಕ್ಕೆ ಗಡೀಪಾರು: ಸುಮಾರು 75ನಿಮಿಷಗಳ ದುಃಖತಪ್ತ ಭಾಷಣವನ್ನು ಮಾಡಿದ ಮುಷರಫ್,ತಾನಿಂದು ಮಹತ್ವದ ನಿರ್ಧಾರವನ್ನು ಕೈಗೊಳ್ಳುವುದಾಗಿ ತಿಳಿಸಿದ್ದು,ಅದರಂತೆ ತನ್ನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ.
ಕಳೆದ 9ವರ್ಷಗಳಿಂದ ಅಧ್ಯಕ್ಷ ಪದವಿಯಲ್ಲಿದ್ದ ಮುಷರಫ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಜೆಡ್ಡಾಕ್ಕೆ ಗಡೀಪಾರು ಮಾಡುವ ಸಾಧ್ಯತೆಗಳಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ.
ಮುಷರಫ್ ಅವರ ಈ ನಿರ್ಧಾರವನ್ನು ಮಾಜಿ ಪ್ರಧಾನಿ ನವಾಜ್ ಷರೀಫ್ ಅವರು,ಇದು ಪಾಕಿಸ್ತಾನದ ಜನತೆಗೆ ಸಂದ ಐತಿಹಾಸಿಕ ವಿಜಯವಾಗಿದೆ ಎಂದು ಬಣ್ಣಿಸಿದ್ದಾರೆ.
|