ನವದೆಹಲಿ: ಕಳೆದ ಕೆಲವು ವಾರಗಳ ಉಹಾಪೋಹಗಳಿಗೆ ಸ್ಪಷ್ಟ ತೆರೆ ಎಳೆದಿರುವ ಪರ್ವೇಜ್ ಮುಷರಫ್ ಅವರ ರಾಜೀನಾಮೆ ಕ್ರಮಕ್ಕೆ ಪ್ರತಿಕ್ರಿಯಿಸಿರುವ ನವಾಜ್ ಶರೀಫ್ ಇದು ಪಾಕಿಸ್ತಾನಕ್ಕೆ ಸಂದ ಜಯವಾಗಿದೆ ಎಂದು ಹೇಳಿದ್ದಾರೆ.
ಮುಷರಫ್ ದುರ್ನಡತೆಗಾಗಿ ಅವರಿಗೆ ವಾಗ್ದಂಡನೆ ವಿಧಿಸಲು ಸಜ್ಜಾಗಿದ್ದ ಆಡಳಿತಾ ರೂಢ ಮೈತ್ರಿಕೂಟದ ಅಂಗಪಕ್ಷವಾಗಿರುವ ಪಿಎಂಎಲ್-ಎನ್‌ನ ವರಿಷ್ಠ ನವಾಜ್ ಶರೀಪ್ ಅವರು ಮುಷರಫ್ ರಾಜೀನಾಮೆಯನ್ನು ಸ್ವಾಗತಿಸಿದ್ದು, ಇದು ಪಾಕಿಸ್ತಾನದ ಜನತೆಗೆ ಸಂದ ಜಯವಾಗಿದೆ ಎಂದು ತಕ್ಷಣ ಪ್ರತಿಕ್ರಿಯಿಸಿದ್ದಾರೆ.
"ಜನತೆ ಇಂದು ಸರ್ವಾಧಿಕಾರದಿಂದ ಮುಕ್ತರಾಗಿದ್ದಾರೆ. ಅವರ ಜೀವನದ ಕಗ್ಗತ್ತಲಿನ ಭಾಗ ಮುಗಿಯಿತೆಂದು ಹೇಳಬಹುದು" ಎಂದು ನವಾಜ್ ಶರೀಫ್ ಹೇಳಿದ್ದಾರೆ.
ಪಾಕಿಸ್ತಾನದ ಪ್ರಜಾಪ್ರಭುತ್ವ ಸರಕಾರವು ತನ್ನ ಕಾರ್ಯಕ್ಷಮತೆ ಮತ್ತು ಸಾಮರ್ಥ್ಯವನ್ನು ಜನತೆಗೆ ತೋರಲಿದೆ. ಸರಕಾರವು ಪ್ರತಿಯೊಬ್ಬ ಪ್ರಜೆಯ ಆಶೋತ್ತರಗಳನ್ನು ಈಡೇರಿಸಲಿದೆ ಎಂದು ನವಾಜ್ ನುಡಿದರು.
ಪ್ರಜಾಪ್ರುಭುತ್ವವನ್ನು ಬೆಂಬಲಿಸಿರುವುದಕ್ಕಾಗಿ ಅವರು ವಿಶ್ವದ ಎಲ್ಲ ಜನತೆ ಮತ್ತು ಮಾಧ್ಯಮಗಳಿಗೆ ವಂದನೆ ಸಲ್ಲಿಸಿದ್ದಾರೆ.
|