ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಮುಷರಫ್ ಏಳು ಬೀಳುಗಳು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಷರಫ್ ಏಳು ಬೀಳುಗಳು
PTI
ರಕ್ತರಹಿತ ಕ್ರಾಂತಿಯೊಂದರ ಮೂಲಕ ಚುನಾಯಿತ ಸರಕಾರವನ್ನು ವಜಾಗೊಳಿಸಿ 9 ವರ್ಷಗಳ ಕಾಲ ಪಾಕಿಸ್ತಾನವನ್ನು ರಾಷ್ಟ್ರಾಧ್ಯಕ್ಷನಾಗಿ ಆಳಿದ ಮಿಲಿಟರಿ ಆಡಳಿತಗಾರ ಪರ್ವೇಜ್ ಮುಷರಫ್ ಸೋಮವಾರ ಪದತ್ಯಾಗ ಮಾಡುವುದರೊಂದಿಗೆ ಪಾಕಿಸ್ತಾನದ ಅನಿಶ್ಚಿತ ರಾಜಕೀಯದ ಮತ್ತೊಂದು ಅಧ್ಯಾಯ ಕೊನೆಗೊಂಡಿತು.

ಗುರುವಾರವಷ್ಟೇ ಪಾಕಿಸ್ತಾನದ ಸಮ್ಮಿಶ್ರ ಸರಕಾರವು ಪಾಕ್ ಅಧ್ಯಕ್ಷರ ವಿರುದ್ಧ ವಾಗ್ದಂಡನೆ ಪ್ರಕ್ರಿಯೆ ಆರಂಭಿಸಲು ನಿರ್ಧರಿಸಿತ್ತು. 1999ರಲ್ಲಿ ರಕ್ತರಹಿತ ಕ್ರಾಂತಿ ಮತ್ತು 2001ರಲ್ಲಿ ಅವರು ಪಾಕ್ ಅಧ್ಯಕ್ಷರಾದಾಗಿನಿಂದ ಕಳೆದ 9 ವರ್ಷಗಳಲ್ಲಿ ಮುಷರಫ್ ಅವರ ಏಳು - ಬೀಳುಗಳತ್ತ ಒಂದು ಪಕ್ಷಿನೋಟ ಇಲ್ಲಿದೆ:

ಅಕ್ಟೋಬರ್ 12, 1999: ಸೇನಾ ಮುಖ್ಯಸ್ಥ ಹುದ್ದೆಯಿಂದ ರಕ್ತ ರಹಿತ ಕ್ರಾಂತಿ ಮೂಲಕ ಸರಕಾರದ ಸರ್ವಾಧಿಕಾರಿಯಾಗಿ ಸ್ವಯಂ ಘೋಷಣೆ.

ಜೂನ್ 20, 2001: ಪಾಕಿಸ್ತಾನದ ರಾಷ್ಟ್ರಪತಿಯಾಗಿ ಅಧಿಕೃತ ಸ್ವಯಂ-ಘೋಷಣೆ. ಅದೇ ವರ್ಷದ ಸೆಪ್ಟೆಂಬರ್ 11ರಂದು ಅಮೆರಿಕ ಮೇಲೆ ಭಯೋತ್ಪಾದನಾ ದಾಳಿ ನಡೆದಂದಿನಿಂದ ಮುಷರಫ್ ಅವರ ಅಧ್ಯಕ್ಷ ಪದವಿಯ ಕುರಿತ ಪಾಶ್ಚಾತ್ಯರ ಅಭಿಪ್ರಾಯ ಬದಲಾಗತೊಡಗಿತು. ಭಯೋತ್ಪಾದನೆ ವಿರುದ್ಧದ ಸಮರದ ಪ್ರಧಾನ ನಾಯಕನೆಂದು ತಮ್ಮನ್ನು ಬಿಂಬಿಸಿಕೊಂಡ ಮುಷರಫ್, ತವರುನಾಡಿನ ಇಸ್ಲಾಮ್‌ವಾದಿಗಳ, ತೀವ್ರವಾದಿಗಳಿಂದ 'ದ್ರೋಹಿ' ಎಂದು ಕರೆಸಿಕೊಂಡರು.

ಏಪ್ರಿಲ್ 2002: ಎಲ್ಲರಿಂದ ಟೀಕೆಗೊಳಗಾಗಿದ್ದ ನೇರಮತಗಣನೆ ನಡೆಸಿದ ಮುಷರಫ್, ತಮ್ಮ ಅಧ್ಯಕ್ಷ ಹುದ್ದೆಯನ್ನು ಗಟ್ಟಿ ಮಾಡಿಕೊಂಡರು. ಅದೇ ವರ್ಷದ ಆಗಸ್ಟ್ ತಿಂಗಳಲ್ಲಿ ಸಂಸತ್ತನ್ನು ವಜಾಗೊಳಿಸುವ ಮತ್ತು ಚುನಾಯಿಸುವ ಅಧಿಕಾರವನ್ನು ತಮ್ಮ ಸುಪರ್ದಿಗೆ ಪಡೆದುಕೊಂಡರು.

ಅಕ್ಟೋಬರ್ 2002: ಮಹಾ ಚುನಾವಣೆಗಳು ನಡೆದು ಅತಂತ್ರ ಸಂಸತ್ತು ನಿರ್ಮಾಣವಾಯಿತು. ಆದರೆ ಇಸ್ಲಾಮಿಕ್ ಪಕ್ಷಗಳ ಒಕ್ಕೂಟ ರಚಿಸಿದ ಮುಷರಫ್, ತಮ್ಮ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡರು. 2004ರ ಡಿಸೆಂಬರ್ 31ರೊಳಗೆ ಸೇನಾ ಹುದ್ದೆ ತ್ಯಾಗ ಮಾಡುವುದಾಗಿ ಭರವಸೆ ನೀಡಿದ ಮುಷರಫ್, ಆ ಬಳಿಕ ವಾಗ್ದಾನ ಮುರಿದರು.

ಮಾರ್ಚ್ 9, 2007: ಅಧಿಕಾರ ದುರುಪಯೋಗ ಆರೋಪದಲ್ಲಿ ಮುಷರಫ್ ಅವರಿಂದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಇಫ್ತಿಕಾರ್ ಚೌಧುರಿ ಅವರ ಅಮಾನತು. ವಕೀಲರೆಲ್ಲರಿಂದ ತೀವ್ರ ಪ್ರತಿಭಟನೆ. ಇದರೊಂದಿಗೆ ಮುಷರಫ್ ಜನಪ್ರಿಯತೆ ಕುಸಿಯಲಾರಂಭಿಸಿತು.

ಜುಲೈ 10: ತಾಲಿಬಾನ್ ಶೈಲಿಯ ಉಗ್ರವಾದವನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಮುಷರಫ್ ಅವರು ಇಸ್ಲಾಮಾಬಾದ್‌ನ ಲಾಲ್ ಮಸೀದಿಗೆ ಸೇನೆಯನ್ನು ನುಗ್ಗಿಸಿದರು. ಸುಮಾರು 105 ಮಂದಿಯ ಸಾವು. ಉಗ್ರಗಾಮಿಗಳ ದಾಳಿ, ಆತ್ಮಹತ್ಯಾ ಬಾಂಬರ್‌ಗಳ ದಾಳಿಯೂ ನಡೆಯಿತು.

ಜುಲೈ 20: ಮುಖ್ಯ ನ್ಯಾಯಮೂರ್ತಿ ಚೌಧುರಿ ಅವರ ಮರುಸ್ಥಾಪನೆಗೆ ಸುಪ್ರೀಂ ಕೋರ್ಟ್ ಆದೇಶ. ಇದರಿಂದ ಮುಷರಫ್ ಅಧಿಕಾರಕ್ಕೆ, ಅಹಂಗೆ ಬಲುದೊಡ್ಡ ಪೆಟ್ಟು.

ಜುಲೈ 27: ದೇಶವನ್ನು ಪ್ರಜಾಸತ್ತಾತ್ಮಕವಾಗಿ ಮುನ್ನಡೆಸುವ ನಿಟ್ಟಿನಲ್ಲಿ ಅಬುಧಾಬಿಯಲ್ಲಿ ಮಾಜಿ ಪ್ರಧಾನಿ ಬೇನಜೀರ್ ಭುಟ್ಟೋ ಜತೆ ಮುಷರಫ್ ಭೇಟಿ. ಸೇನಾ ಮುಖ್ಯಸ್ಥ ಪದವಿ ತ್ಯಾಗ ಮಾಡುವಂತೆ ಭುಟ್ಟೋ ಒತ್ತಾಯ.

ಸೆಪ್ಟೆಂಬರ್ 10: ದೇಶಭ್ರಷ್ಟರಾಗಿ ಕಾಲ ಕಳೆಯುತ್ತಿದ್ದ ಮಾಜಿ ಪ್ರಧಾನಿ ನವಾಜ್ ಶರೀಫ್, ಸುಪ್ರೀಂ ಕೋರ್ಟ್ ಸಮ್ಮತಿಯೊಂದಿಗೆ ಪಾಕಿಸ್ತಾನಕ್ಕೆ ವಾಪಸಾಗುವ ನಿಟ್ಟಿನಲ್ಲಿ ಕರಾಚಿಯಲ್ಲಿ ಬಂದಿಳಿದಾಗ, ಅವರ ಬಂಧನ. ಸೌದಿ ಅರೇಬಿಯಾಕ್ಕೆ ಗಡೀಪಾರು.

ಅಕ್ಟೋಬರ್ 2: ಭುಟ್ಟೋ ವಿರುದ್ಧದ ಭ್ರಷ್ಟಾಚಾರ ಕೇಸುಗಳನ್ನು ಕೈಬಿಡುತ್ತೇವೆ ಎಂದು ಮುಷರಫ್ ಸರಕಾರ ಘೋಷಿಸುವುದರೊಂದಿಗೆ ದೇಶಭ್ರಷ್ಟರಾಗಿ ಕಾಲ ಕಳೆಯುತ್ತಿದ್ದ ಭುಟ್ಟೋ ವಾಪಸಾತಿಗೆ ಹಾದಿ ಸುಗಮ.

ಅಕ್ಟೋಬರ್ 6: ಅಧ್ಯಕ್ಷೀಯ ಚುನಾವಣೆಯಲ್ಲಿ ಮುಷರಫ್‌ಗೆ ವಿಜಯ.

ಅಕ್ಟೋಬರ್ 19: ಎಂಟು ವರ್ಷಗಳ ದೇಶಭ್ರಷ್ಟ ಜೀವನದಿಂದ ಪಾಕಿಸ್ತಾನಕ್ಕೆ ಮರಳಿದ ಬೇನಜೀರ್ ಹತ್ಯೆಗೆ ಆತ್ಮಹತ್ಯಾ ಬಾಂಬರ್ ಪ್ರಯತ್ನ.

ನವೆಂಬರ್ 2: ಸೇನಾ ಮುಖ್ಯಸ್ಥನಾಗಿದ್ದುಕೊಂಡು ಮುಷರಫ್ ಮರು ಆಯ್ಕೆಗೆ ಕಣಕ್ಕಿಳಿಯಲು ಅರ್ಹರೇ ಎಂಬುದನ್ನು ವಿಚಾರಿಸಲು ಸುಪ್ರೀಂ ಕೋರ್ಟ್ ಕಲಾಪ ಆರಂಭ.

ನವೆಂಬರ್ 3: ಮುಷರಫ್ ಅವರಿಂದ ತುರ್ತು ಪರಿಸ್ಥಿತಿ ಘೋಷಣೆ. ಪ್ರತಿಪಕ್ಷದ ಸಾವಿರಾರು ಮುಖಂಡರು, ವಕೀಲರುಗಳ ಬಂಧನ.

ನವೆಂಬರ್ 11: ಜನವರಿ 8ರಂದು ಚುನಾವಣೆ ನಡೆಯಲಿದೆ ಎಂದು ಮುಷರಫ್ ಘೋಷಣೆ.

ನವೆಂಬರ್ 13: ಲಾಹೋರ್‌ನಲ್ಲಿ ತುರ್ತು ಪರಿಸ್ಥಿತಿ ವಿರುದ್ಧ ಪ್ರತಿಭಟನಾ ಪ್ರದರ್ಶನ ನಡೆಸುವ ಹುನ್ನಾರದಲ್ಲಿದ್ದ ಭುಟ್ಟೋಗೆ ಒಂದು ವಾರ ಕಾಲ ಗೃಹಬಂಧನ. ಮುಷರಫ್ ಅಧ್ಯಕ್ಷ ಪದತ್ಯಾಗ ಮಾಡಬೇಕೆಂದು ಭುಟ್ಟೋ ಒತ್ತಾಯ.

ನವೆಂಬರ್ 15: ಚುನಾವಣಾ ಸಂದರ್ಭ ಉಸ್ತುವಾರಿ ಸರಕಾರದ ಮುಖ್ಯಸ್ಥರಾಗಿ ಮುಷರಫ್‌ರಿಂದ ಸೆನೆಟ್ ಅಧ್ಯಕ್ಷ ಮೊಹಮ್ಮದೀನ್ ಸುಮ್ರೋ ನೇಮಕ.

ನವೆಂಬರ್ 22 : ಕಾಮನ್ವೆಲ್ತ್‌ನಿಂದ ಪಾಕಿಸ್ತಾನ ಅಮಾನತು.

ನವೆಂಬರ್ 25: ದೇಶಭ್ರಷ್ಟರಾಗಿದ್ದ ನವಾಜ್ ಶರೀಫ್ ಮರಳಿ ಪಾಕಿಸ್ತಾನಕ್ಕೆ ಆಗಮನ.

ನವೆಂಬರ್ 28: ಮುಷರಫ್‌ರಿಂದ ಸೇನಾಧಿಕಾರದ ಹುದ್ದೆ ಜನರಲ್ ಅಶ್ಫಾಕ್ ಕಯಾನಿಗೆ ಹಸ್ತಾಂತರ.

ನವೆಂಬರ್ 29: ಪ್ರಜಾಸತ್ತಾತ್ಮಕ ನಾಯಕನಾಗಿ ಮುಷರಫ್ ಪ್ರಮಾಣವಚನ.

ಡಿಸೆಂಬರ್ 15: ತುರ್ತು ಪರಿಸ್ಥಿತಿ ಹಿಂತೆಗೆದುಕೊಂಡ ಮುಷರಫ್‌ರಿಂದ ಸಂವಿಧಾನದ ಮರುಸ್ಥಾಪನೆ.

ಡಿಸೆಂಬರ್ 27: ಗನ್ ಮತ್ತು ಬಾಂಬ್ ಬಳಸಿ ಪಾಕಿಸ್ತಾನಿ ಪ್ರತಿಪಕ್ಷ ನಾಯಕಿ ಬೇನಜೀರ್ ಭುಟ್ಟೋ ಹತ್ಯೆ.

ಜನವರಿ 2: ಭುಟ್ಟೋ ಹತ್ಯೆಯ ನಂತರದ ಆಂತರಿಕ ಕ್ಷೋಭೆಯಿಂದ ಚುನಾವಣೆಗಳು ಜ.8ರ ಬದಲು ಫೆ.18ಕ್ಕೆ ಮುಂದೂಡಿಕೆ.

ಫೆಬ್ರವರಿ 18: ಮುಷರಫ್ ಪರವಾಗಿರುವ ಪಾಕಿಸ್ತಾನ ಮುಸ್ಲಿಂ ಲೀಗ್ ವಿರುದ್ಧ ದಿವಂಗತ ಭುಟ್ಟೋ ಪತಿ ಆಸಿಫ್ ಅಲಿ ಜರ್ದಾರಿ ನೇತೃತ್ವದ ಪಿಪಿಪಿ (ಪಾಕಿಸ್ತಾನ ಪೀಪಲ್ಸ್ ಪಾರ್ಟಿ) ಮತ್ತು ನವಾಜ್ ಶರೀಫ್ ನೇತೃತ್ನದ ಪಾಕಿಸ್ತಾನ ಮುಸ್ಲಿಂ ಲೀಗ್ (ನವಾಜ್)ಗೆ ಚುನಾವಣೆಯಲ್ಲಿ ಭರ್ಜರಿ ವಿಜಯ. ಮುಷರಫ್ ಅವರನ್ನು ಗಡೀಪಾರು ಮಾಡಲಾಗುತ್ತದೆ ಎಂಬ ಶಂಕೆ ಅದಾಗಲೇ ಹುಟ್ಟಿಕೊಂಡಿತ್ತು. ತಾನು ಪದಚ್ಯುತಿಗೊಳಿಸಿದ್ದ ಅದೇ ವ್ಯಕ್ತಿ-ನವಾಜ್ ಶರೀಫ್ ಅವರನ್ನು ಈ ಚುನಾವಣೆಗಳು ಅಧಿಕಾರದ ಸಮೀಪಕ್ಕೆ ತಂದು ನಿಲ್ಲಿಸಿರುವುದು ಇಲ್ಲಿ ಉಲ್ಲೇಖಾರ್ಹ.

ಮಾರ್ಚ್ 9: ಮುಷರಫ್‌ಗೆ ವಿರುದ್ಧವಾದ ಸರಕಾರ ರಚನೆಗೆ ತನ್ನ ವಿರೋಧಪಕ್ಷವಾಗಿರುವ ಜರ್ದಾರಿ ಅವರ ಪಿಪಿಪಿ ಜೊತೆ ಕೈಜೋಡಿಸುವುದಾಗಿ ಶರೀಫ್ ಘೋಷಣೆ.

ಆಗಸ್ಟ್ 7: ಮುಷರಫ್ ವಿರುದ್ಧ ವಾಗ್ದಂಡನೆ ಪ್ರಕ್ರಿಯೆ ಆರಂಭಿಸುವುದಾಗಿ ಆಡಳಿತಾರೂಢ ಸಮ್ಮಿಶ್ರ ಸರಕಾರ ಹೇಳಿಕೆ.

ಆಗಸ್ಟ್ 18: ಮುಷರಫ್ ಪದತ್ಯಾಗ.
ಮತ್ತಷ್ಟು
ಮುಷರಫ್ ರಾಜೀನಾಮೆ ಪಾಕ್‌ಗೆ ಸಂದ ಜಯ
ಮುಷ್ ಅಂತಿಮ ಭಾಷಣದ ಮುಖ್ಯಾಂಶ
ಮುಷರಫ್ ರಾಜೀನಾಮೆ ಘೋಷಣೆ
ನೇಪಾಳ: ಪ್ರಚಂಡ ಪ್ರಮಾಣಕ್ಕೆ ಸಿದ್ಧತೆ
ಇರಾನ್: ಉಪಗ್ರಹವಾಹಕ ರಾಕೆಟ್ ಪರೀಕ್ಷೆ
ಮುಷರಫ್ ವಾಗ್ದಂಡನೆ ಪ್ರಕ್ರಿಯೆ ಆರಂಭ