ಮಾವೋವಾದಿ ಮುಖಂಡ ಪ್ರಚಂಡ ಅವರು ರಾಜಾಳ್ವಿಕೆಯೇತರ ನೇಪಾಳದ ಮೊದಲ ಪ್ರಧಾನ ಮಂತ್ರಿಯಾಗಿ ಸೋಮವಾರ ಅಧಿಕಾರ ಸ್ವೀಕರಿಸಿದರು. 53ರ ಹರೆಯದ ಪುಷ್ಪ ಕಮಲ ದಹಾಲ್ ಅಲಿಯಾಸ್ ಪ್ರಚಂಡ ಅವರಿಗೆ ನೇಪಾಳದ ಅಧ್ಯಕ್ಷ ರಾಮ್ ಬರನ್ ಯಾದವ್ ಅವರು ರಾಷ್ಟ್ರಪತಿ ಭವನದಲ್ಲಿ ಪ್ರಮಾಣವಚನ ಬೋಧಿಸಿದರು.
ನಾನು ನನ್ನ ದೇಶಕ್ಕೆ ಮತ್ತು ದೇಶದ ಜನತೆಗೆ ವಿಶ್ವಸಾರ್ಹತೆಯಿಂದ ಕೆಲಸ ಮಾಡುತ್ತೇನೆ ಎಂದು ಸಾಂಪ್ರದಾಯಿಕ ನೇಪಾಳೀ ಉಡುಗೆಯ ಬದಲು, ಪಾಶ್ಚಾತ್ಯ ಸೂಟ್ ಮತ್ತು ಕರಿ ಟೋಪಿ ಧರಿಸಿದ್ದ ಪ್ರಚಂಡ ಹೇಳಿದರು.
ನಿರ್ಗಮನ ಪ್ರಧಾನಿ ಗಿರಿಜಾ ಪ್ರಸಾದ್ ಕೊಯಿರಾಲ ಅವರು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಹಾಜರಾಗಲಿಲ್ಲ. ಆದರೆ ಅವರ ನೇಪಾಳಿ ಕಾಂಗ್ರೆಸ್ ಪಕ್ಷದ ಪ್ರತಿನಿಧಿಯಾಗಿ ಮಾಜಿ ಪ್ರಧಾನಿ ಶೇರ್ ಬಹಾದೂರ್ ದೇವುಬಾ ಅವರು ಹಾಜರಿದ್ದರು.
ಉಪರಾಷ್ಟ್ರಪತಿ ಪರಮಾನಂದ ಝಾ, ಶಾಸನ ಸಭೆಯ ಅಧ್ಯಕ್ಷ ಸುಭಾಸ್ ನೆಮ್ವಾಂಗ್, ಮುಖ್ಯ ನ್ಯಾಯಮೂರ್ತಿ ಕೇದಾರನಾಥ ಗಿರಿ ಅವರು ಉಪಸ್ಥಿತರಿದ್ದರು.
ವಿಶ್ವದ ಅತ್ಯಂತ ಕಿರಿಯ ಗಣರಾಜ್ಯವಾಗಿ ರೂಪುಗೊಂಡಿರುವ ನೇಪಾಳದ ಪ್ರಧಾನಿಯನ್ನಾಗಿ ಪ್ರಚಂಡ ಅವರನ್ನು ಸಂವಿಧಾನ ಸಭೆಯು ಕಳೆದ ಶುಕ್ರವಾರ ಭಾರೀ ಬಹುಮತದಿಂದ ಆರಿಸಿತ್ತು. ಇದರೊಂದಿಗೆ ನಾಲ್ಕು ತಿಂಗಳಿಂದ ಅತಂತ್ರ ಸಂಸತ್ತಿನಿಂದಾಗಿ ಉಂಟಾಗಿದ್ದ ರಾಜಕೀಯ ಅಸ್ಥಿರತೆ ಕೊನೆಗೊಂಡಿತ್ತು.
|