ತನ್ನ ಅಧ್ಯಕ್ಷ ಪದವಿಗೆ ರಾಜೀನಾಮೆ ನೀಡಿರುವ ಪರ್ವೇಜ್ ಮುಷರಫ್ ಸದ್ಯವೇ ತನ್ನ ಕುಟುಂಬದೊಂದಿಗೆ ಮೆಕ್ಕಾಗೆ ತೆರಳಲಿದ್ದು, ಆ ಬಳಿಕ ಪಾಕಿಸ್ತಾನದಿಂದ ಹೊರಗೆ ಜೀವನ ನಡೆಸುವ ಕುರಿತು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
ಅಧಿಕಾರದಲ್ಲಿರುವ ಮಿತ್ರಪಕ್ಷಗಳು ತನ್ನ ವಿರುದ್ಧ ವಾಗ್ದಂಡನೆ ವಿಧಿಸಲು ತಯ್ಯಾರಿ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಮುಷರಫ್ ಸೋಮವಾರ ತನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇವರು ಸೌದಿಅರೇಬಿಯಾಗೆ ತೆರಳುವ ಮುನ್ನ ಸ್ವಲ್ಪ ಸಮಯವನ್ನು ರಾಷ್ಟ್ರದಲ್ಲಿಯೇ ಕಳೆಯಲಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ತನ್ನ ವಿರುದ್ಧ ಹೇರಲಾಗಿರುವ ಆರೋಪಗಳಿಂದ ನುಣುಚಿಕೊಳ್ಳಲು ಅವರು ರಾಷ್ಟ್ರ ತೊರೆಯುತ್ತಿದ್ದಾರೆ ಎಂಬ ಅಭಿಪ್ರಾಯ ಮೂಡಬಾರದು ಎಂಬ ನಿಟ್ಟಿನಲ್ಲಿ ಅವರು ಒಂದಿಷ್ಟು ದಿನ ರಾಷ್ಟ್ರದಲ್ಲಿ ಕಳೆಯ ಬಯಸಿದ್ದಾರೆಂದು ಹೇಳಲಾಗಿದೆ.
ದೂರದರ್ಶನ ಭಾಷಣದಲ್ಲಿ ತನ್ನ ರಾಜೀನಾಮೆ ಘೋಷಿಸಿದ ಬಳಿಕ ಇಸ್ಲಾಮಾಬಾದಿನ ಅಧ್ಯಕ್ಷರ ಭವನವನ್ನು ತೊರೆದ ನಂತರ ಅವರು ರಾವಲ್ಪಿಂಡಿಯ ತನ್ನ ಶಿಬಿರದ ಕಚೇರಿಗೆ ತೆರಳಿದ್ದಾರೆ. ಅವರು ಅಲ್ಲಿ ಕೆಲವು ದಿನ ತಂಗಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
ಮುಷರಫ್ ಅವರು ಮೆಕ್ಕಾಗೆ ಧಾರ್ಮಿಕ ಯಾತ್ರೆ ತೆರಳಿದ ಬಳಿಕ ಕೆಲವು ಸಮಯ ಪಾಕಿಸ್ತಾನದಿಂದ ಹೊರಗೆ ಕಾಲ ಕಳೆಯಬಹುದಾಗಿದೆ. ಈ ಸಮಯದಲ್ಲಿ ಅವರು ಅಮೆರಿಕದಲ್ಲಿರುವ ತನ್ನ ನಿಕಟ ಸಂಬಧಿಗಳ ಭೇಟಿಗಾಗಿ ಅಮೆರಿಕಕ್ಕೆ ತೆರಳಬಹುದು ಎಂದು ಹೇಳಲಾಗಿದೆ.
ಮುಷರಫ್ ಅವರ ಕಿರಿಯ ಸಹೋದರ ನವೇದ್ ಚಿಕಾಗೋದಲ್ಲಿ ನೆಲೆಸಿದ್ದಾರೆ. ಪುತ್ರ ಬಿಲಾಲ್ ಬೋಸ್ಟನ್ ನಿವಾಸಿಯಾಗಿದ್ದಾರೆ.
|