ಪರ್ವೇಜ್ ಮುಷರಫ್ ಅವರು ಪಾಕಿಸ್ತಾನದ ಅಧ್ಯಕ್ಷ ಪದವಿ ತ್ಯಜಿಸುವುದು ಅನಿವಾರ್ಯವಾಗಿತ್ತು ಎಂದು ಬಣ್ಣಿಸಿರುವ ಪಾಕ್ ಮಾಧ್ಯಮಗಳು, ಅವರು ತನ್ನ ಸ್ಥಾನ ತ್ಯಾಗಕ್ಕೆ ಇಷ್ಟು ಸುದೀರ್ಘ ಕಾಲಾವಕಾಶವನ್ನು ಯಾಕೆ ಪಡೆದಿದ್ದರು ಎಂಬ ಅಚ್ಚರಿ ವ್ಯಕ್ತಪಡಿಸಿವೆ.
ಅಧ್ಯಕ್ಷರ ಪದತ್ಯಾಗ ರಾಷ್ಟ್ರದ ಅವಶ್ಯಕತೆಯಾಗಿತ್ತು ಎಂದು ಪಾಕಿಸ್ತಾನದ ಸ್ಥಳೀಯ ಮಾಧ್ಯಮಗಳು ಅಭಿಪ್ರಾಯಿಸಿವೆ.
ಅಧ್ಯಕ್ಷರ ರಾಜೀನಾಮೆ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿರುವ, ಪ್ರಮುಖ ಆಂಗ್ಲ ದೈನಿಕ ಡಾನ್, "ಮುಷರಫ್ ಅನಿವಾರ್ಯತೆಗೆ ಬಾಗಿ, ತನ್ನ ರಾಜೀನಾಮೆ ಘೋಷಿಸಿದ್ದಾರೆ" ಎಂದು ತನ್ನ ಸಂಪಾದಕೀಯದಲ್ಲಿ ಬರೆದಿದೆ.
ಇದೀಗ ತಡೆಯು ತೆರವುಗೊಂಡಿದ್ದು, ರಾಜಕೀಯ ಪಕ್ಷಗಳು, ರಾಷ್ಟ್ರ ಎದುರಿಸುವ ಸಮಸ್ಯೆಗಳನ್ನು ಪರಿಹರಿಸಲು ರಂಗವು ಮುಕ್ತವಾಗಿದೆ ಎಂದು ಪತ್ರಿಕೆ ಹೇಳಿದೆ. ಭಾರತ ಮತ್ತು ಅಫ್ಘಾನಿಸ್ತಾನದೊಂದಿಗಿನ ಸಂಬಂಧವಲ್ಲದೆ, ಉಗ್ರವಾದ ಮತ್ತು ಆರ್ಥಿಕತೆಯು ರಾಷ್ಟ್ರ ಎದುರಿಸುತ್ತಿರುವ ಪ್ರಮುಖ ಸಮಸ್ಯೆಯಾಗಿದೆ ಎಂದು ಅದು ಹೇಳಿದೆ.
ಪರ್ಯಾಯ ಮಾರ್ಗಗಳಿಲ್ಲದ ಕಾರಣ ಅಧ್ಯಕ್ಷ ಮುಷರಫ್ ತನ್ನ ಸ್ಥಾನ ತ್ಯಜಿಸಿದ್ದಾರೆ. ಅವರ ಒಂಭತ್ತು ವರ್ಷಗಳ ಆಡಳಿತ ಕೊನೆಗೊಂಡಿದೆ ಎಂದು ಇನ್ನೊಂದು ಇಂಗ್ಲಿಷ್ ಪತ್ರಿಕೆ ದಿ ನ್ಯೂಸ್ ಹೇಳಿದೆ.
|