ಸೋಮವಾರ ಪಾಕಿಸ್ತಾನ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಪರ್ವೇಜ್ ಮುಷರಫ್, ತಾನು ಪಾಕಿಸ್ತಾನ ತೊರೆಯುವ ಕುರಿತ ವದಂತಿಗಳನ್ನು ತಳ್ಳಿಹಾಕಿದ್ದಾರೆ. ಪಾಕಿಸ್ತಾನ ತನ್ನ 'ಪ್ರಥಮ ಪ್ರೀತಿ' ಎಂದಿರುವ ಅವರು ತನ್ನ ರಾಜೀನಾಮೆಯು ಸೋಲೆಂದು ಪ್ರತಿಫಲನವಾಗುವುದಿಲ್ಲ ಎಂದು ಹೇಳಿದ್ದಾರೆ.
"ತನ್ನ ರಾಜೀನಾಮೆಯು ತನ್ನ ಸೋಲು ಅಲ್ಲ" ಎಂದಿರುವ ಅವರು ತಾನು ಪಾಕಿಸ್ತಾನ ಮತ್ತು ಜನತೆಯ ಹಿತದೃಷ್ಟಿಯಿಂದ ಈ ಕ್ರಮಕ್ಕೆ ಮುಂದಾಗಿರುವುದಾಗಿ ಹೇಳಿದ್ದಾರೆಂದು ಜಿಯೋ ಸುದ್ದಿ ವಾಹಿನಿ ಉಲ್ಲೇಖಿಸಿದೆ.
ತನ್ನ ಪ್ರಥಮ ಪ್ರೀತಿಯಾಗಿರುವ ಪಾಕಿಸ್ತಾನವನ್ನು ತೊರೆಯಲು ತನಗೆ ಮನಸ್ಸಿಲ್ಲ ಎಂದು ಅವರು ತನ್ನನ್ನು ಭೇಟಿಯಾದ ಹಲವು ನಿಯೋಗಗಳಿಗೆ ತಿಳಿಸಿದ್ದಾರೆ.
ಸೋಮವಾರ ರಾಷ್ಟ್ರವನ್ನುದ್ದೇಶಿಸಿ ಮಾಡಿರುವ ಕೊನೆಯ ಭಾಷಣದ ವೇಳೆಗೆ ಭರವಸೆ ನೀಡಿರುವಂತೆ ತಾನು ರಾಷ್ಟ್ರದ ಆರ್ಥಿಕತೆಯ ಕುರಿತು ಶ್ವೇತಪತ್ರ ಹೊರಡಿಸುವುದಾಗಿ ಮುಷರಫ್ ಹೇಳಿದ್ದಾರೆ. ಅವರು ಬುಧವಾರದಂದು ಕೆಲವು ರಾಜಕಾರಣಿಗಳನ್ನು ಭೇಟಿಮಾಡಲಿದ್ದಾರೆ ಎಂದು ಸುದ್ದಿ ವಾಹಿನಿ ಹೇಳಿದೆ.
ಮುಷರಫ್ ಮೆಕ್ಕಾ ಯಾತ್ರೆ ತೆರಳಿದ ಬಳಿಕ ಅಮೆರಿಕಕ್ಕೆ ತೆರಳಲಿದ್ದಾರೆ ಎಂಬ ಮಾಧ್ಯಮ ವರದಿಗಳನ್ನು ತಳ್ಳಿಹಾಕಿರುವ ಅವರು ಇದು ಆಧಾರ ರಹಿತ ವರದಿಯಾಗಿದೆ ಎಂದು ಹೇಳಿದ್ದಾರೆ.
ನಿಯೋಗಳು ಮುಷರಫ್ ಅವರನ್ನು ಅವರ ರಾವಲ್ಪಿಂಡಿಯ ನಿವಾಸದಲ್ಲಿ ಭೇಟಿಯಾಗಿದ್ದಾರೆ. ಮುಷರಫ್ ಕಳೆದ ವರ್ಷ ಸೇನಾ ಮುಖ್ಯಸ್ಥನ ಸ್ಥಾನ ತ್ಯಜಿಸಿದ್ದ ಬಳಿಕವೂ ಸೇನಾ ಮುಖ್ಯಸ್ಥರ ನಿವಾಸವನ್ನು ತೊರೆದಿರಲಿಲ್ಲ.
|