ಮಾಜಿ ರಾಷ್ಟ್ರಾಧ್ಯಕ್ಷ ಪರ್ವೇಜ್ ಮುಷರಫ್ ಅಮಾನತುಗೊಳಿಸಿದ ನ್ಯಾಯಾಧೀಶರ ಮರುನೇಮಕಾತಿ ಕುರಿತು ಶುಕ್ರವಾರದೊಳಗೆ ಅಡಳಿತರೂಢ ಸರಕಾರ ನಿರ್ಧರ ಕೈಗೊಳ್ಳದಿದ್ದಲ್ಲಿ ಸಮ್ಮಿಶ್ರ ಸರಕಾರದಿಂದ ಹೊರಬರುವುದಾಗಿ ಪಾಕಿಸ್ತಾನ ಮುಸ್ಲಿಂ ಲೀಗ್ (ನವಾಜ್)ಮುಖಂಡ ಮಾಜಿ ಪ್ರಧಾನಿ ನವಾಜ್ ಷರೀಫ್ ಹೇಳಿದ್ದಾರೆ.
ಮಾಜಿ ರಾಷ್ಟ್ರಾಧ್ಯಕ್ಷ ಪರ್ವೇಜ್ ಮುಷರಫ್ ವಾಗ್ದಂಡನೆಯ ಬೆದರಿಕೆಯಿಂದಾಗಿ ರಾಜೀನಾಮೆ ನೀಡಿದ ನಂತರ ಮಾಜಿ ಪ್ರಧಾನಿ ನವಾಜ್ ಷರೀಫ್ ಅಮಾನತುಗೊಂಡ ನ್ಯಾಯಾಧೀಶರ ಮರುನೇಮಕಕ್ಕೆ ಸರಕಾರಕ್ಕೆ ಗಡುವು ನೀಡಿದ್ದರಿಂದ ಉಭಯ ಪಕ್ಷಗಳಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ವರ್ಷ ನ್ಯಾಯಾಧೀಶರನ್ನು ಅಮಾನತುಗೊಳಿಸಿದ ನಂತರ ದೇಶದಾದ್ಯಂತ ಅಲ್ಲೋಲ ಕಲ್ಲೋಲವಾಗಿದ್ದು, ಅವರನ್ನು ಮರುನೇಮಕ ಮಾಡುವುದು ಅಗತ್ಯವಾಗಿದೆ ಎಂದು ನವಾಜ್ ಮಾಧ್ಯಮಗಳಿಗೆ ತಿಳಿಸಿದ್ದಾರೆ
ನಾವು ಸರಕಾರವನ್ನು ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನ ಮಾಡುತ್ತಿಲ್ಲ. ಆದರೆ ನಮಗೆ ಬೇರೆದಾರಿಯಿಲ್ಲದೇ ಇರುವುದರಿಂದ ಪಾಲುದಾರ ಪಕ್ಷದಿಂದ ಹೊರಬಂದು ವಿರೋಧಪಕ್ಷವಾಗಿ ಕಾರ್ಯನಿರ್ವಹಿಸಲು ಸಿದ್ಧ ಎಂದು ನವಾಜ್ ಹೇಳಿದ್ದಾರೆ.
ಕಳೆದ ವರ್ಷ ಪಿಪಿಪಿ ಪಕ್ಷದ ನಾಯಕರ ವಿರುದ್ಧ ಭ್ರಷ್ಟಾಚಾರ ಆರೋಪದ ಪ್ರಕರಣಗಳು ದಾಖಲಾಗಿದ್ದರಿಂದ ಅಮಾನತುಗೊಂಡ ಮುಖ್ಯ ನ್ಯಾಯಮೂರ್ತಿಯನ್ನು ಮರುನೇಮಕ ಮಾಡಿದಲ್ಲಿ ತಮಗೆ ತಿರುಗುಬಾಣವಾಗಬಹುದು ಎನ್ನುವ ಹೆದರಿಕೆಯಿಂದಾಗಿ ಪಿಪಿಪಿ ನಾಯಕ ಜರ್ದಾರಿ ಅನಿಶ್ಚಿತತೆಯನ್ನು ಎದುರಿಸುತ್ತಿದ್ದಾರೆ ರಾಜಕೀಯ ಪರಿಣಿತರು ಅಭಿಪ್ರಾಯಪಟ್ಟಿದ್ದಾರೆ.
|