ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಅಧ್ಯಕ್ಷ ಪದವಿಗೆ ಜರ್ದಾರಿ ಸೂಕ್ತ: ಪಿಪಿಪಿ,ಎಂಕ್ಯುಎಂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಧ್ಯಕ್ಷ ಪದವಿಗೆ ಜರ್ದಾರಿ ಸೂಕ್ತ: ಪಿಪಿಪಿ,ಎಂಕ್ಯುಎಂ
ಇಸ್ಲಾಮಾಬಾದ್: ತೆರವುಗೊಂಡಿರುವ ಪಾಕಿಸ್ತಾನ ಅಧ್ಯಕ್ಷ ಸ್ಥಾನಕ್ಕೆ, ಪಿಪಿಪಿ ಮುಖ್ಯಸ್ಥ ಆಸಿಫ್ ಆಲಿ ಜರ್ದಾರಿ ಅವರನ್ನು ಆಯ್ಕೆ ಮಾಡಲು ಅಲ್ಲಿನ ಎರಡು ಪ್ರಮುಖ ರಾಜಕೀಯ ಪಕ್ಷಗಳಾದ ಪಿಪಿಪಿ ಮತ್ತು ಎಂಕ್ಯುಎಂ ಪ್ರಬಲ ಲಾಬಿ ನಡೆಸುತ್ತಿವೆ.

ಇದೇ ಸಂದರ್ಭದಲ್ಲಿ ಇನ್ನೊಂದು ಪ್ರಮುಖ ಪಾರ್ಟಿಯಾದ ನವಾಜ್ ಶರೀಫ್ ನೇತೃತ್ವದ ಪಿಎಂಎಲ್(ಎನ್) ಪಿಪಿಪಿ ಮುಖ್ಯಸ್ಥ ಜರ್ದಾರಿಗೆ ಬೆಂಬಲ ನೀಡುವ ಕುರಿತು ಇನ್ನೂ ಸ್ಪಷ್ಟಪಡಿಸಿಲ್ಲ. ಆದರೆ ಜರ್ದಾರಿ ನೇತೃತ್ವದ ಪಿಪಿಪಿ ಮತ್ತು ಉರ್ದು ಭಾಷೆ ಮಾತನಾಡುವವರನ್ನು ಪ್ರತಿನಿಧಿಸುತ್ತಿರುವ ಮುತ್ತಾಹಿದಾ ಕ್ವಯಾಮಿ ಮೂವ್‌ಮೆಂಟ್(ಎಂಕ್ಯುಎಂ) ಜರ್ದಾರಿಯವರನ್ನು ಬೆಂಬಲಿಸುವುದಾಗಿ ತನ್ನ ಸ್ಪಷ್ಟ ನಿಲುವನ್ನು ತೋರಿದೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.

ಜರ್ದಾರಿಯವರು ಪಕ್ಷದ ಕಾರ್ಯಕರ್ತರಿಗೆ ನಿನ್ನೆ ರಾತ್ರಿ ನೀಡಿದ ಔತಣ ಕೂಟದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪಿಪಿಪಿ ಕಾರ್ಯಕರ್ತೆ ಫರ್ಜಾನಾ ರಾಜಾ, ಎಲ್ಲಾ ಪಿಪಿಪಿ ಕಾರ್ಯಕರ್ತರು ಜರ್ದಾರಿಯವರನ್ನು ಮುಂದಿನ ಪಾಕ್ ಅಧ್ಯಕ್ಷರಾಗುವಂತೆ ಒತ್ತಾಯಿಸಿದರೆಂದು ತಿಳಿಸಿದ್ದಾರೆ.

ಜರ್ದಾರಿಯವರು ರಾಷ್ಟ್ರಾಧ್ಯಕ್ಷರ ಸ್ಥಾನಕ್ಕೆ ಸೂಕ್ತವ್ಯಕ್ತಿ ಎಂಬ ವಿಚಾರದಲ್ಲಿ ಏಕತೆ ಇದೆ ಎಂದು ಅವರು ಒತ್ತಿ ಹೇಳಿದ್ದಾರೆ.

ಇದೇ ವೇಳೆ, ಇನ್ನು ಮುಂದೆ ಯಾವುದೇ ಅಧಿಕಾರವಿಲ್ಲದ ಅಧ್ಯಕ್ಷ ಪದವಿಯನ್ನು ಜರ್ದಾರಿಯವರು ವಹಿಸುವ ಕುರಿತು ಕೆಲವು ಸದಸ್ಯರುಗಳಲ್ಲಿ ಭಿನ್ನಾಭಪ್ರಾಯವಿದೆ ಎಂದು ಪಕ್ಷದ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.

ಅಧ್ಯಕ್ಷ ಪದವಿಯ ಸ್ಥಾನಾರ್ಥಿಯ ಆಯ್ಕೆಯನ್ನು ನಾಳೆ ನಡೆಯಲಿರುವ ಪಿಪಿಪಿ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಗುವುದೆಂದು ಜರ್ದಾರಿಯವರು ತಿಳಿಸಿದ್ದಾಗಿ ಅವರು ಹೇಳಿದ್ದಾರೆ.

ಎಂಕ್ಯುಎಂ ಮುಖ್ಯಸ್ಥ ಅಲ್ತಾಫ್ ಹುಸೈನ್‌ ಅವರು ಜರ್ದಾರಿ ಮುಂದಿನ ಅಧ್ಯಕ್ಷರಾಗಲಿ ಎಂದು ನೀಡಿದ ಹೇಳಿಕೆಯನ್ನು, ಈ ಮೊದಲು ಜಲ ಮತ್ತು ವಿದ್ಯುತ್ ಖಾತೆ ಮಂತ್ರಿ ರಾಜಾ ಪರ್ವೇಜ್ ಅಶ್ರಫ್ ಅವರು ಸ್ವಾಗತಿಸಿದ್ದರು.

''ಈ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆ. ಪಿಪಿಪಿ ಸದಸ್ಯರೊಬ್ಬರಿಗೆ ಉನ್ನತ ಪದವಿ ಅಲಂಕರಿಸಲು ಅವಕಾಶವಿದೆ. ಕೇಂದ್ರ, ಪಂಜಾಬ್ ಪ್ರಾಂತ್ಯ ಮತ್ತು ಇತರ ಮೂರು ರಾಜ್ಯಗಳಲ್ಲೂ ಪಿಪಿಪಿಯೇ ಅಧಿಕಾರದಲ್ಲಿದೆ.'' ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ಪಿಪಿಪಿಯು ಸಂವಿಧಾನವನ್ನು ಎತ್ತಿ ಹಿಡಿಯಲಿದೆ ಮತ್ತು ಪದಚ್ಯುತಗೊಂಡಿರುವ ನ್ಯಾಯಾಧೀಶರ ಮರುನೇಮಕ ಮಾಡಲಿದೆಯೆಂದು ಅಶ್ರಫ್ ಹೇಳಿದ್ದಾರೆ.

ಲಂಡನ್‌ನಲ್ಲಿ ನೀಡಿದ ಹೇಳಿಕೆಯೊಂದರಲ್ಲಿ ಎಂಕ್ಯುಎಂ ಮುಖ್ಯಸ್ಥ ಹುಸೈನ್ ''ಪ್ರಜಾಪ್ರಭುತ್ವಕ್ಕೆ ಮಾಜಿ ಪ್ರಧಾನಿ ಬೆನ್‌ಜೀರ್ ಭುಟ್ಟೊರವರ ತ್ಯಾಗವನ್ನು ಗಮನದಲ್ಲಿರಿಸಿ ಮತ್ತು ನನ್ನ ಸಹಪ್ರವರ್ತಕರ ಸಲಹೆಯನ್ನು ಸ್ವೀಕರಿಸುತ್ತಾ ನಾನು ಅಧ್ಯಕ್ಷರ ಕಾರ್ಯಾಲಯವನ್ನು ಪಡೆಯುವುದು ಜರ್ದಾರಿಯವರ ಹಕ್ಕು ಎಂದು ನಿರ್ಧಾರಕ್ಕೆ ಬಂದಿರುವೆ ಮತ್ತು ಹಾಗಾಗಿ ಪಕ್ಷದ ಮುಖ್ಯಸ್ಥನಾಗಿ ನನ್ನ ಪಕ್ಷದ ಪರವಾಗಿ ಜರ್ದಾರಿಯವರು ಮುಂದಿನ ಅಧ್ಯಕ್ಷರಾಗುವಂತೆ ನಾನು ಪ್ರಸ್ತಾಪನೆ ಇಡುತ್ತಿದ್ದೇನೆ'' ಎಂದು ಅವರು ತಿಳಿದ್ದಾರೆ.

ಇದೇ ವೇಳೆ ಪಿಪಿಪಿ ಮುಖಂಡ ಜರ್ದಾರಿಯವರು ಮಾಜಿ ಅಧ್ಯಕ್ಷ ಮುಷರಫ್‌ರನ್ನು ಉಚ್ಛಾಟಿಸುವಲ್ಲಿ ತನ್ನ ಪಕ್ಷವನ್ನು ಬೆಂಬಲಿಸಿದ್ದಕ್ಕಾಗಿ ಎಂಕ್ಯೂಎಂ ಮುಖ್ಯಸ್ಥರಿಗೆ ತನ್ನ ಧನ್ಯವಾದಗಳನ್ನು ತಿಳಿಸಿದ್ದಾರೆ.

ಅಲ್ತಾಫ್ ಮತ್ತು ಅವರ ಪಕ್ಷದ ಸದಸ್ಯರುಗಳು ಮಾಜಿ ಅಧ್ಯಕ್ಷರು, ಸ್ಥಾನತೊರೆದು ದೇಶದಲ್ಲಿ ಶಾಂತಿ ಕಾಪಾಡುವಂತೆ ಮಾಡುಲ್ಲಿ ಪ್ರಮುಖ ಪಾತ್ರ ವಹಿಸಿದ್ದಾಗಿ ಹೇಳಿಕೆಯೊಂದರಲ್ಲಿ ಜರ್ದಾರಿ ಅಭಿನಂದಿಸಿದ್ದಾರೆ.
ಮತ್ತಷ್ಟು
ರೈಲು ದುರಂತ: ಆರೋಪಿಗೆ 11 ಜೀವಾವಧಿ ಶಿಕ್ಷೆ
ಸಮ್ಮಿಶ್ರ ಸರಕಾರದಿಂದ ನಿರ್ಗಮನ: ನವಾಜ್ ಬೆದರಿಕೆ
ಮ್ಯಾಡ್ರಿಡ್ ಭೀಕರ ವಿಮಾನ ಅಪಘಾತ; ಕನಿಷ್ಠ 153ಸಾವು
ಬ್ರಿಟನ್: ರಾಣಿ, ರಾಜಕುಮಾರ ಹತ್ಯಾ ಸಂಚು ಬಯಲು
ಪಾಕ್ ತೊರೆಯುವ ವರದಿಗಳನ್ನು ತಳ್ಳಿಹಾಕಿದ ಮುಷ್
ಆ.22ರಂದು ಜಾರ್ಜಿಯಾದಿಂದ ರಶ್ಯಾ ಹಿಂತೆಗೆತ