ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅಮಾನತುಗೊಳಿಸಿದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ಮರುಮನೇಮಕ ಮಾಡುವಂತೆ ಮೈತ್ರಿ ಸರಕಾರಕ್ಕೆ ಮಾಜಿ ಪ್ರಧಾನಿ ನವಾಜ್ ಷರೀಫ್ ವಿಧಿಸಿರುವ ಗಡುವನ್ನು ಬುಧವಾರಕ್ಕೆ ಮುಂದೂಡಿದ್ದಾರೆ,
ಅಮಾನತುಗೊಂಡ ನ್ಯಾಯಾಧೀಶರನ್ನು ಶುಕ್ರವಾರದೊಳಗೆ ಮರುನೇಮಕ ಮಾಡದಿದ್ದಲ್ಲಿ ಪಿಪಿಪಿ ನೇತೃತ್ವದ ಸರಕಾರಕ್ಕೆ ನೀಡಿರುವ ಬೆಂಬಲ ಹಿಂತೆಗೆಯುವುದಾಗಿ ಷರೀಫ್ ಹೇಳಿಕೆ ನೀಡಿದ್ದರು. ಆದರೆ ಜಮಾತೆ ಉಲೇಮಾ-ಎ-ಇಸ್ಲಾಮ್ ಮುಖ್ಯಸ್ಥ ಮೌಲನಾ ಫಜಲುರ್ ರೆಹಮಾನ್ ಹಾಗೂ ಅವಾಮಿ ನ್ಯಾಷನಲ್ ಪಾರ್ಟಿಯ ಅಧ್ಯಕ್ಷ ಅಸ್ಫಂದರ್ ವಲಿ ಖಾನ್ ಅವರ ಮಧ್ಯಸ್ಥಿಕೆಯಿಂದಾಗಿ ಈ ಕುರಿತು ಬುಧವಾರದವರೆಗೆ ನಿರೀಕ್ಷಿಸುವುದಾಗಿ ಷರೀಫ್ ಹೇಳಿದ್ದಾರೆ.
ಮಾಜಿ ಅಧ್ಯಕ್ಷ ಪರ್ವೆಜ್ ಮುಷರಫ್ ಅಗಸ್ಟ್ 18 ರಂದು ತಮ್ಮ ಪದವಾಗಿ ರಾಜೀನಾಮೆ ನೀಡಿದ್ದು, 24 ಗಂಟೆಯೊಳಗಾಗಿ ಅಮಾನತುಗೊಂಡ ನ್ಯಾಯಾಧೀಶರ ಮರುನೇಮಕ ಮಾಡುವುದಾಗಿ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಅಶ್ವಾಸನೆ ನೀಡಿತ್ತು. ಆದರೆ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ತನ್ನ ವಚನಬದ್ದತೆಯನ್ನು ಹುಸಿಗೊಳಿಸಿದೆ ಎಂದು ಮಾಜಿ ಪ್ರಧಾನಿ ನವಾಜ್ ಷರೀಫ್ ಜಮಾತೆ ಉಲೇಮಾ-ಎ-ಇಸ್ಲಾಮ್ ಮುಖ್ಯಸ್ಥ ಮೌಲನಾ ಫಜಲುರ್ ರೆಹಮಾನ್ ಹಾಗೂ ಅವಾಮಿ ನ್ಯಾಷನಲ್ ಪಾರ್ಟಿಯ ಅಧ್ಯಕ್ಷ ಅಸ್ಫಂದರ್ ವಲಿ ಖಾನ್ ಅವರಿಗೆ ತಿಳಿಸಿದ್ದಾರೆ.
ಶನಿವಾರ ಹಾಗೂ ಭಾನುವಾರದಂದು ರಜೆಯಿರುವುದರಿಂದ ಸಂಸತ್ತಿನಲ್ಲಿ ಮಸೂದೆಯನ್ನು ಮಂಡಿಸಲು ಸಾಧ್ಯವಾಗುವುದಿಲ್ಲ. ಸೋಮವಾರದಂದು ಸಂಸತ್ತಿನಲ್ಲಿ ಮಂಡಿಸುವ ಸಾಧ್ಯತೆಗಳಿವೆ ಎಂದು ಮಾಜಿ ಪ್ರದಾನಿ ನವಾಜ್ ಷರೀಫ್ ತಿಳಿಸಿದ್ದಾರೆ.
ಸೋಮವಾರ ಮತ್ತು ಮಂಗಳವಾರದಂದು ಮಸೂದೆ ಕುರಿತಂತೆ ಚರ್ಚೆ ನಡೆಯಲಿದ್ದು, ಬುಧವಾರದಂದು ಮಸೂದೆ ಜಾರಿಗೊಳಿಸಿ ಅಮಾನತುಗೊಂಡ ನ್ಯಾಯಾಧೀಶರನ್ನು ಮರುನೇಮಕ ಮಾಡಿಕೊಳ್ಳಲಾಗುವುದು ಎಂದು ನವಾಜ್ ಷರೀಫ್ ತಿಳಿಸಿದ್ದಾರೆ.
|