1993ರ ಮುಂಬೈ ಸರಣಿ ಬಾಂಬ್‌ಸ್ಫೋಟದ ಆರೋಪಿ ಕುಖ್ಯಾತ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಆತನ ಸಹೋದರ ನೂರಾ ಪಾಕಿಸ್ತಾನದ ಐಎಸ್‌ಐ ಹಾಗೂ ಪಾಕ್ ಸೇನೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಬಂಧಿತ ಕರೀಮುಲ್ಲಾ ಖಾನ್ ಹೇಳಿದ್ದಾನೆ.
ಕರಾಚಿಯಲ್ಲಿರುವ ದಾವೂದ್ ನಿವಾಸಕ್ಕೆ ಪಾಕಿಸ್ತಾನ ಸೇನೆಯ ಅಧಿಕಾರಿಗಳು ಹಾಗೂ ಐಎಸ್‌ಐ ಅಧಿಕಾರಿಗಳು ನಿರಂತರವಾಗಿ ಭೇಟಿ ನೀಡುತ್ತಾರೆ. ದಾವೂದ್ ಹೊರಹೋಗುವುದು ಅಪರೂಪ ಎಂದು ಸಿಬಿಐ ಅಧಿಕಾರಿಗಳಿಗೆ ಕರೀಮುಲ್ಲಾ ಖಾನ್ ತಿಳಿಸಿದ್ದಾನೆ.
ದಾವೂದ್ ಇಬ್ರಾಹಿಂ ನಕಲಿ ನೋಟು ಹಾಗೂ ಮಾದಕ ದೃವ್ಯದ ವಹಿವಾಟು ಪ್ರಮುಖವಾಗಿದ್ದು ಪಾಕಿಸ್ತಾನದ ಶೇರುಪೇಟೆಯಲ್ಲಿ ಕೂಡಾ ಹೂಡಿಕೆ ಮಾಡಿದ್ದಾನೆ ಎಂದು ಕರೀಮುಲ್ಲಾ ತಿಳಿಸಿದ್ದಾನೆ.
ದಾವೂದ್ ಇಬ್ರಾಹಿಂ ಪಾಕಿಸ್ತಾನದಾದ್ಯಂತ ಸಂಪರ್ಕ ಜಾಲವನ್ನು ಹೊಂದಿದ್ದು ಆತನ ತಂಡದ ಸದಸ್ಯರು ಪಾಕಿಸ್ತಾನ ಸೇನೆಯ ನಿವಾಸಗಳಲ್ಲಿ ವಾಸಿಸುತ್ತಾರೆ ಎಂದು ಕರೀಮುಲ್ಲಾ ಖಾನ್ ಮಾಹಿತಿ ನೀಡಿದ್ದಾನೆ.
ಕರೀಮುಲ್ಲಾ ಖಾನ್ 1993ರ ಮುಂಬೈ ಸ್ಫೋಟದ ನಂತರ ಕಳೆದ 15 ವರ್ಷಗಳಿಂದ ಪರಾರಿಯಾಗಿದ್ದ. ಕರೀಮುಲ್ಲಾ ಖಾನ್‌ನನ್ನು ಮುಂಬೈ ಅಪರಾಧ ದಳದ ಪೊಲೀಸರು ನಲಸೊಪಾರಾ ಪ್ರದೇಶದಲ್ಲಿ ಬಂಧಿಸಿದ್ದರು.
|