ಪಾಕಿಸ್ತಾನದ ಸ್ವಾತ್ ಕಣಿವೆಯ ಆಗ್ನೆಯ ಭಾಗದಲ್ಲಿರುವ ಚಾರ್ಬಾಗ್ ಪೊಲೀಸ್ ಠಾಣೆಗೆ ಆತ್ಮಾಹುತಿ ದಳದ ಸದಸ್ಯ ಸ್ಫೋಟಕ ತುಂಬಿದ ವಾಹನವನ್ನು ನುಗ್ಗಿಸಿದ ಪರಿಣಾಮವಾಗಿ 20 ಮಂದಿ ಸಾವನ್ನಪ್ಪಿದ್ದು ಅನೇಕರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆತ್ಮಾಹುತಿ ದಳದ ಸದಸ್ಯ ಸ್ವಾತ್ ಜಿಲ್ಲೆಯ ಮಿಂಗೊರಾದಿಂದ 10 ಕಿ.ಮಿ. ದೂರದಲ್ಲಿರುವ ಚಾರ್ಬಾಗ್ ಪೊಲೀಸ್ ಠಾಣೆಗೆ ಶನಿನಾರ ಬೆಳಿಗ್ಗೆ ದಾಳಿ ನಡೆಸಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನದಲ್ಲಿ ಇತ್ತೀಚಿನ ದಿನಗಳಲ್ಲಿ ಭಾರಿ ಪ್ರಮಾಣದ ಆತ್ಮಾಹುತಿ ದಾಳಿಗಳು ನಡೆಯುತ್ತಿದ್ದು, ಚಾರಬಾಗ್ ಪೊಲೀಸ್ ಠಾಣೆ ಭದ್ರತೆಗೆ ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು ಪ್ರದೇಶದಾದ್ಯಂತ ಕರ್ಫ್ಯೂ ಹೇರಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತೆಹರಿಕ್-ಏ-ತಾಲಿಬಾನ್ ಉಗ್ರಗಾಮಿ ಸಂಘಟನೆಯ ವಕ್ತಾರ ಮುಸ್ಲಿಂ ಖಾನ್ ಸ್ಫೋಟಕ್ಕೆ ತಾವು ಹೊಣೆಗಾರರು ಎಂದು ಹೇಳಿಕೊಂಡಿದ್ದಾನೆ.
ಪ್ರಸ್ತುತ ವಾಯುವ್ಯ ಪ್ರಾಂತ್ಯದ ಸ್ವಾತ್ ಕಣಿವೆಯಲ್ಲಿ ಸ್ಥಳೀಯ ತಾಲಿಬಾನಿಗಳ ವಿರುದ್ದ ಸೇನಾಪಡೆಗಳು ಭಾರಿ ಕಾರ್ಯಾಚರಣೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸೇಡಿನ ಅಂಗವಾಗಿ ಉಗ್ರಗಾಮಿ ಸಂಘಟನೆಗಳು ಹೆಚ್ಚಿನ ಆತ್ಮಾಹುತಿ ದಾಳಿ ನಡೆಸುತ್ತಿವೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.
|