ಮಾಜಿ ರಾಷ್ಟ್ರಾಧ್ಯಕ್ಷ ಪರ್ವೆಜ್ ಮುಷರಫ್ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ದಿವಂಗತ ಮಾಜಿ ಪ್ರಧಾನಿ ಬೇನಜಿರ್ ಭುಟ್ಟೋ ಅವರ ಪತಿ ಆಸಿಫ್ ಅಲಿ ಜರ್ದಾರಿ ಅವರನ್ನು ಆಯ್ಕೆ ಮಾಡಿರುವುದಾಗಿ ಎಂದು ಪಕ್ಷದ ಮೂಲಗಳು ತಿಳಿಸಿವೆ
ದೇಶದ ಪ್ರಮುಖ ಪಕ್ಷವಾದ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಅವಿರೋಧವಾಗಿ ಜರ್ದಾರಿ ಅವರನ್ನು ಅನುಮೋದಿಸಿದೆ ಎಂದು ವಾರ್ತಾ ಸಚಿವ ಶೆರ್ರಿ ರೆಹಮಾನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮಾಜಿ ರಾಷ್ಟ್ರಾಧ್ಯಕ್ಷ ಮುಷರಫ್ ಆರಂಭದಲ್ಲಿ ಸೇನಾ ಮುಖ್ಯಸ್ಥರಾಗಿ ನಂತರ ರಾಷ್ಟ್ರಾಧ್ಯಕ್ಷರಾಗಿ ಒಂಬತ್ತು ವರ್ಷಗಳ ಆಳ್ವಿಕೆ ನಡೆಸಿದ್ದು, ನೂತನವಾಗಿ ಅಧಿಕಾರಕ್ಕೆ ಬಂದ ಅಡಳಿತಾರೂಢ ಮೈತ್ರಿ ಪಕ್ಷ ವಾಗ್ದಂಡನೆ ವಿಧಿಸುವ ಬೆದರಿಕೆಯ ಹಿನ್ನೆಲೆಯಲ್ಲಿ ಮುಷ್ ಸೋಮವಾರದಂದು ರಾಜೀನಾಮೆಯನ್ನು ಸಲ್ಲಿಸಿದ್ದರು.
ಸೆಪ್ಟೆಂಬರ್ 6 ರಂದು ನಡೆಯಲಿರುವ ರಾಷ್ಟ್ರಾಧ್ಯಕ್ಷ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತಂತೆ ಜರ್ದಾರಿ ಇನ್ನು ತೀರ್ಮಾನ ಕೈಗೊಳ್ಳಬೇಕಾಗಿದ್ದು. ಮುಂದಿನ 24 ಗಂಟೆಗಳಲ್ಲಿ ತಮ್ಮ ನಿರ್ಧಾರವನ್ನು ಬಹಿರಂಗಪಡಿಸಲಿದ್ದಾರೆ ಎಂದು ಸಚಿವ ರೆಹಮಾನ್ ತಿಳಿಸಿದ್ದಾರೆ.
ಪಾಕಿಸ್ತಾನದ ಚುನಾವಣಾ ಆಯೋಗ ಅಧ್ಯಕ್ಷ ಸ್ಥಾನಕ್ಕೆ ಆಗಸ್ಟ್ 26 ರಂದು ನಾಮಪತ್ರ ಸಲ್ಲಿಕೆ, ಸೆಪ್ಟೆಂಬರ್ ಆರರಂದು ಚುನಾವಣೆ ದಿನಾಂಕ ನಿಗದಿಪಡಿಸಿದ ಹಿನ್ನೆಲೆಯಲ್ಲಿ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ತನ್ನ ಅಧಿಕೃತ ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ.
|