ಪಾಕಿಸ್ತಾನದಲ್ಲಿ ಸೆಪ್ಟೆಂಬರ್ 6 ರಂದು ನಡೆಯಲಿರುವ ರಾಷ್ಟ್ರಾಧ್ಯಕ್ಷರ ಚುನಾವಣೆಯಲ್ಲಿ ಪೀಪಲ್ಸ್ ಪಾರ್ಟಿಯ ಅಭ್ಯರ್ಥಿಯಾದ ಆಸಿಫ್ ಅಲಿ ಜರ್ದಾರಿಯವರ ಆಯ್ಕೆಯನ್ನು ವಿರೋಧಿಸುವುದಾಗಿ ಪಾಕಿಸ್ತಾನ ಮುಸ್ಲಿಂ ಲೀಗ್ (ನವಾಜ್) ನಾಯಕ ನವಾಜ್ ಷರೀಫ್ ಹೇಳಿದ್ದಾರೆ.
ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಸಭೆ ಸೇರಿ ಅಧ್ಯಕ್ಷ ಹುದ್ದೆಗೆ ಆಸಿಫ್ ಅಲಿ ಜರ್ದಾರಿಯವರನ್ನು ಅವಿರೋಧವಾಗಿ ಆಯ್ಕೆ ಮಾಡಿದೆ. ಈ ಹಿಂದೆ ಮುಷರಫ್ ಅವರನ್ನು ಟೀಕಿಸುತ್ತಿದ್ದ ಜರ್ದಾರಿ ,ಇದೀಗ ಪ್ರತ್ಯೇಕತಾವಾದಿಗಳ ವಿರುದ್ಧದ ಹೋರಾಟದಲ್ಲಿ ಅಮೆರಿಕದ ಬೆಂಬಲಕ್ಕಾಗಿ ಜರ್ದಾರಿ ಮುಷರಫ್ ಗೆಳೆತನವನ್ನು ಮುಂದುವರಿಸಿಕೊಂಡು ಹೋಗಲು ನಿರ್ಧರಿಸಿದ್ದಾರೆ ಎಂದು ಆರೋಪಿಸಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ.
1990ರಲ್ಲಿ ದಿವಂಗತ ಮಾಜಿ ಪ್ರಧಾನಿ ಬೇನಜಿರ್ ಭುಟ್ಟೋ ಅಧಿಕಾರದಲ್ಲಿದ್ದಾಗ ಜರ್ದಾರಿ ಭಾರಿ ಭ್ರಷ್ಟಾಚಾರದ ಪ್ರಕರಣದಲ್ಲಿ ಸಿಲುಕಿದ್ದು, ಮಿಸ್ಟರ್ 10 ಪರ್ಸೆಂಟ್ ಎಂಬ ಅಡ್ಡಹೆಸರಿನೊಂದಿಗೆ ಕುಖ್ಯಾತಿ ಪಡೆದಿದ್ದರು. ಅಂತಹ ವ್ಯಕ್ತಿ ದೇಶದ ಅಧ್ಯಕ್ಷರಾಗಿ ಆಯ್ಕೆಯಾಗುವುದು ಅನೇಕ ಪಾಕಿಸ್ತಾನಿಯರಿಗೆ ಅಸಮಧಾನ ತರಬಹುದು ಎಂದು ನವಾಜ್ ಷರೀಫ್ ಹೇಳಿಕೆ ನೀಡಿದ್ದಾರೆ.
ಮಾಜಿ ಅಧ್ಯಕ್ಷ ಮುಷರಫ್ ರಾಜೀನಾಮೆ ಪಡೆಯುವಲ್ಲಿ ಯಶಸ್ವಿಯಾದ ಮೈತ್ರಿಕೂಟ ಇದೀಗ ಅವಸಾನದ ಅಂಚಿನಲ್ಲಿದೆ. ಜರ್ದಾರಿ ಇತರ ರಾಜಕೀಯ ಪಕ್ಷಗಳೊಂದಿಗೆ ಕುದುರೆ ವ್ಯಾಪಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸುವುದರೊಂದಿಗೆ ಮೈತ್ರಿಕೂಟದ ಮೈತ್ರಿಯ ಮೇಲೆ ಭಾರಿ ಪರಿಣಾಮ ಬೀರಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ
|