ಮಾಜಿ ರಾಷ್ಟ್ರಪತಿ ಪರ್ವೆಜ್ ಮುಷರಫ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ದಿವಂಗತ ಮಾಜಿ ಪ್ರಧಾನಿ ಬೇನಜಿರ್ ಭುಟ್ಟೋ ಅವರ ಪತಿ ಪಿಪಿಪಿ ಸಹಾಯಕ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಸ್ಪರ್ಧಿಸುವುದು ನಿರ್ಧಾರವಾಗಿದೆ ಎಂದು ಪಕ್ಷದ ಮೂಲಗಳು ಖಚಿತಪಡಿಸಿವೆ.
ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಸೆಪ್ಟೆಂಬರ್ 6 ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ಜರ್ದಾರಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದ ನಂತರ ಜರ್ದಾರಿ ತಮ್ಮ ಸಮ್ಮತಿಯನ್ನು ಸೂಚಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಮುಖಂಡ ಆಸಿಫ್ ಅಲಿ ಜರ್ದಾರಿ ಹಾಗೂ ಪಾಕಿಸ್ತಾನ ಮುಸ್ಲಿಂ ಲೀಗ್(ನವಾಜ್) ನ ನಾಯಕ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಮಧ್ಯೆ ಅಮಾನತುಗೊಂಡ ನ್ಯಾಯಾಧೀಶರ ಮರುನೇಮಕ ಸೇರಿದಂತೆ ಹಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯ ಮೂಡಿ ಮೈತ್ರಿಯಲ್ಲಿ ಬಿರುಕು ಕಾಣಿಸಿಕೊಂಡಿದೆ.
ಪಿಪಿಪಿ ಮುಖಂಡ ಆಸಿಫ್ ಅಲಿ ಜರ್ದಾರಿ ಪಕ್ಷದ ನಿಲುವಿಗೆ ಬದ್ದರಾಗಿರುವುದರಿಂದ ರಾಷ್ಟ್ರಾಧ್ಯಕ್ಷ ಚುನಾವಣೆಗೆ ಸ್ಪರ್ಧಿಸಲು ಸಮ್ಮತಿಸಿದ್ದಾರೆಂದು ಪಕ್ಷದ ಉಪಪ್ರಧಾನ ಕಾರ್ಯದರ್ಶಿ ರಝಾ ರಬ್ಬಾನಿ ತಿಳಿಸಿದ್ದಾರೆ.
|