ಪಾಕಿಸ್ತಾನದ ನಾರ್ಥ್‌ವೆಸ್ಟ್ ಫ್ರಂಟೈಯರ್ ಪ್ರಾಂತ್ಯದಲ್ಲಿ ಸೇನಾಪಡೆ ಹಾಗೂ ಸ್ಥಳೀಯ ತಾಲಿಬಾನ್‌ಗಳೊಂದಿಗೆ ನಡೆದ ಘರ್ಷಣೆಯಲ್ಲಿ 40 ಉಗ್ರರು ಹಾಗೂ 26 ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಸೇನಾಪಡೆಗಳ ವಕ್ತಾರರು ತಿಳಿಸಿದ್ದಾರೆ.
ತಾಲಿಬಾನಿಗಳ ಭದ್ರಕೋಟೆಯಾದ ಸ್ವಾತ್ ಕಣಿವೆಗೆ ಸೇನಾಪಡೆಗಳು ಮುತ್ತಿಗೆ ಹಾಕಿದ್ದು ಭಾರಿ ಪ್ರಮಾಣದ ಹೋರಾಟ ಮುಂದುವರಿದಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಶನಿವಾರದಂದು ಪ್ರವಾಸೋದ್ಯಮ ಕೇಂದ್ರವಾದ ಸ್ವಾತ್ ಕಣಿವೆಯಲ್ಲಿರುವ ಪೊಲೀಸ್ ಠಾಣೆಯ ಮೇಲೆ ಆತ್ಮಾಹುತಿ ಕಾರ್ ಬಾಂಬ್ ದಾಳಿ ನಡೆಸಿದಾಗ 6 ಮಂದಿ ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದ್ದರು. ನಂತರ ರಸ್ತೆ ಬದಿ ಬಾಂಬ್ ಸ್ಫೋಟಿಸಿ ಒಬ್ಬ ನಾಗರಿಕ ಸೇರಿದಂತೆ ನಾಲ್ಕು ಮಂದಿ ಗಾಯಗೊಂಡಿದ್ದರು.
ಗುರುವಾರದಂದು ಸಶಸ್ತ್ರ ಕಾರ್ಖಾನೆಯ ದ್ವಾರದ ಬಳಿ ನಡೆದ ಆತ್ಮಹತ್ಯಾ ಅವಳಿ ಬಾಂಬ್ ದಾಳಿಯಲ್ಲಿ 67 ಮಂದಿ ಸಾವನ್ನಪ್ಪಿ 100ಕ್ಕೂ ಹೆಚ್ಚಿನ ಮಂದಿ ಗಾಯಗೊಂಡಿದ್ದರು
ಅಫಘಾನ್ ಗಡಿಭಾಗದಲ್ಲಿರುವ ತಾಲಿಬಾನಿಗಳ ವಿರುದ್ದ ನಡೆಸುತ್ತಿರುವ ಸೇನಾ ಕಾರ್ಯಾಚರಣೆಯನ್ನು ನಿಲ್ಲಿಸದಿದ್ದಲ್ಲಿ ಪೊಲೀಸರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದೇವು. ದೇಶದಾದ್ಯಂತ ಹಿಂಸಾಚಾರ ಮುಂದುವರಿಸುವುದಾಗಿ ತಾಲಿಬಾನ್ ಪ್ರತಿಜ್ಞೆ ಮಾಡಿತ್ತು. ಆದರೆ ಸರಕಾರ ನಮ್ಮ ಎಚ್ಚರಿಕೆಯನ್ನು ನಿರ್ಲಕ್ಷಿಸಿದೆ ಎಂದು ಉಗ್ರರ ವಕ್ತಾರ ಮುಸ್ಲಿಂ ಖಾನ್ ಹೇಳಿದ್ದಾರೆ.
ಸ್ವಾತ್ ಕಣಿವೆಯಲ್ಲಿ ಶನಿವಾರದಂದು ನಡೆದ ಉಗ್ರರ ವಿರುದ್ದದ ಕಾರ್ಯಾಚರಣೆಯಲ್ಲಿ 37 ಉಗ್ರರು ಹಾಗೂ ಇಬ್ಬರು ಸೈನಿಕರು ಹತರಾಗಿದ್ದಾರೆ ಎಂದು ಸೇನಾ ವಕ್ತಾರ ಮೇಜರ್ ನಾಸೀರ್ ಅಲಿ ತಿಳಿಸಿದ್ದಾರೆ.
|