ಇದು 72ರ ಹರೆಯದ ವೃದ್ಧೆ ತಾಯಿಯೊಬ್ಬಳ ಮನದಾಳದ ಬಯಕೆ. ಭಾರತದಲ್ಲಿ ಕಳೆದ 20 ವರ್ಷಗಳಿಂದ ಜೈಲಿನಲ್ಲಿರುವ ತನ್ನ ಮಗ ಸೊಹೇಲ್ ಶಹಜಾದ್‌ನನ್ನೊಮ್ಮೆ ಮಮತೆಯಿಂದ ಅಪ್ಪಿಕೊಳ್ಳಬೇಕೆಂಬ ಅದಮ್ಯ ಆಸೆ. ಈತನ ಬಿಡುಗಡೆ ಕುರಿತಾದ ಅರ್ಜಿಯ ವಿಚಾರಣೆ ಮುಂದಿನ ತಿಂಗಳು ನಡೆಯಲಿದೆ.
ಈಗಾಗಲೇ ದೃಷ್ಟಿ ಮಂದವಾಗುತ್ತಿದೆ. ಮಗ ಭಾರತದಲ್ಲಿ ಬಂಧನಕ್ಕೀಡಾದ ಬಳಿಕ ಹಲವು ರೋಗಗಳೂ ಮುತ್ತಿಕೊಂಡಿವೆ. ನಾನು ಹೋಗುವುದರೊಳಗೆ ಒಂದು ಬಾರಿ ಮಗನನ್ನೊಮ್ಮೆ ತಬ್ಬಿಕೊಳ್ಳಬೇಕು ಎಂದು ನಫೀಸ್ ಅಂಜುಮ್ ಎಂಬ ಈ ತಾಯಿ ಕಣ್ಣೀರಿಳಿಸುತ್ತಾ ಹೇಳುತ್ತಿದ್ದಾಳೆ.
ಭಾರತದ ಗಡಿಯಲ್ಲಿರುವ ಪಾಕಿಸ್ತಾನದ ಪಠಾಣ್ ಜಿಲ್ಲೆಗೆ 1988ರಲ್ಲಿ ತಮ್ಮ ಗೆಳೆಯನ ಮದುವೆಗೆ ಹೋಗಿದ್ದ ಶಹಜಾದ್ ಮತ್ತೆ ಮರಳಿರಲಿಲ್ಲ. ಪಂಜಾಬ್ ಪ್ರಾಂತ್ಯದ ಬಹವಾಲ್ಪುರ ನಿವಾಸಿಯಾಗಿರುವ ಶಹಜಾದ್, ಗೆಳೆಯರೊಂದಿಗೆ ಬೇಟೆಗೆ ತೆರಳಿದ್ದ. ಕಾಡಿನಲ್ಲಿ ಆತ ಗೆಳೆಯರಿಂದ ಬೇರ್ಪಟ್ಟಿದ್ದ. ಈ ಮಿತ್ರರ ಕಣ್ಣಿಗೂ ಆತ ಬಿದ್ದಿರಲಿಲ್ಲ ಎಂದು ವಿವರಿದ್ದಾಳೆ ಅಂಜುಮ್.
ಶಹಜಾದ್ ಬಹುಶಃ ಗೊತ್ತಿಲ್ಲದೆ ಭಾರತದ ಗಡಿಯೊಳಗೆ ಪ್ರವೇಶಿಸಿರಬಹುದು. ಅಂದಿನಿಂದಲೂ ನಾನು ಅವನಿಗಾಗಿ ಕಾಯುತ್ತಿದ್ದೇನೆ. ಎಂದು ಬರುವನೋ... ಎಂದು ಆತಂಕ ತುಂಬಿದ ಕಣ್ಣುಗಳಿಂದ ಹೇಳುತ್ತಾಳೆ ಅಂಜುಮ್.
ಈಗ 50 ಹರೆಯದವನಾಗಿರುವ ಶಹಜಾದ್‌ನನ್ನು 1988ರ ಮಾರ್ಚ್ 25ರಂದು ಹರ್ಯಾಣದ ಪಟ್ಟಣವೊಂದರಿಂದ ಬಂಧಿಸಲಾಗಿತ್ತು ಎನ್ನುತ್ತವೆ ದಾಖಲೆಗಳು. ಸಮರ್ಪಕ ದಾಖಲೆಗಳಿಲ್ಲದೆ ಅಕ್ರಮವಾಗಿ ಭಾರತ ಪ್ರವೇಶಿಸಿದ್ದಕ್ಕಾಗಿ ಆತನಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. 1991ರಲ್ಲಿ ಆತನ ಬಿಡುಗಡೆಯಾದ ಬಳಿಕ, ಆತನನ್ನು ನಿಗೂಢವಾಗಿ ರಾಜಸ್ತಾನ ಪೊಲೀಸರಿಗೆ ಹಸ್ತಾಂತರಿಸಲಾಯಿತು ಮತ್ತು ಅವರು ಶಹಜಾದ್ ಮೇಲೆ ಎರಡು ಕ್ರಿಮಿನಲ್ ಕೇಸುಗಳನ್ನು ದಾಖಲಿಸಿದರು. ಲಭ್ಯ ದಾಖಲೆಗಳಲ್ಲಿರುವಂತೆ, 2005ರ ಜೂನ್ 27ರಂದು ಜೈಪುರದ ನ್ಯಾಯಾಲಯವೊಂದು ಶಹಜಾದ್ ಬಿಡುಗಡೆಗೆ ಆದೇಶಿಸಿತು ಮತ್ತು ಆತನನ್ನು ಪಾಕಿಸ್ತಾನಕ್ಕೆ ಮರಳಿಸಲು ವ್ಯವಸ್ಥೆ ಮಾಡುವಂತೆ ರಾಜಸ್ಥಾನ ಪೊಲೀಸರಿಗೆ ಸೂಚಿಸಿತು. ಆದರೆ, ಆತನನ್ನು ಮರಳಿ ಜೈಲಿಗೆ ಸೇರಿಸಲಾಯಿತು.
ಈ ವಿವರಗಳಿರುವ ದಾಖಲೆ ಪತ್ರಗಳು ಶಹಜಾದ್ ಸೋದರ ಸಂಬಂಧಿ ಅನಾಸ್ ಎಂಬಾತನ ಬಳಿಯಿದ್ದು, ಆತ ಇದನ್ನು, ಶಹಜಾದ್ ಬಿಡುಗಡೆಗೆ ಸುಪ್ರೀಂ ಕೋರ್ಟಿನಲ್ಲಿ ಶ್ರಮಿಸುತ್ತಿರುವ ಮಾನವ ಹಕ್ಕುಗಳ ಕಾರ್ಯಕರ್ತರ ಮೂಲಕ ಪಡೆದುಕೊಂಡಿದ್ದಾನೆ. ಶಹಜಾದ್ ಬಿಡುಗಡೆ ಖಚಿತ ಎಂಬ ವಿಶ್ವಾಸದಲ್ಲಿದ್ದಾರೆ ಆತನ ವಕೀಲ ಮತ್ತು ಮಾನವ ಹಕ್ಕುಗಳ ಹೋರಾಟಗಾರ ಬಲವಂತ ಸಿಂಗ್ ಬ್ಲೋರಿಯಾ ರಾಜ್. ಇದು ಅಕ್ರಮ ಬಂಧನ ಎಂಬುದು ಅವರ ವಾದ. ಯಾಕೆಂದರೆ, ಶಹಜಾದ್ ಮಾಡಿದ ತಪ್ಪಿಗೆ ಈಗಾಗಲೇ ಸಾಕಷ್ಟು ಅವಧಿಯ ಶಿಕ್ಷೆ ಅನುಭವಿಸಿದ್ದಾನೆ ಎನ್ನುತ್ತಾರವರು.
ವೃತ್ತಿಯಲ್ಲಿ ಎಲೆಕ್ಟ್ರಿಶಿಯನ್ ಆಗಿದ್ದ ಶಹಜಾದ್, ಅಂಜುಮ್ ಮತ್ತು ದಿ.ಸಯ್ಯದ್ ಮಂಜೂರ್ ಹುಸೇನ್ ಅವರ ಹಿರಿಯ ಪುತ್ರ. ತಂದೆ ತನ್ನ ಮಗನನ್ನು ನೋಡಲು ಎರಡು ಬಾರಿ ಭಾರತಕ್ಕೆ ಹೋಗಿದ್ದರಾದರೂ, ಒಂದು ಬಾರಿ ಮಾತ್ರವೇ, ಕೇವಲ 10 ನಿಮಿಷದ ಭೇಟಿಗೆ ಅವಕಾಶ ನೀಡಲಾಗಿತ್ತು. ಮರಣಶಯ್ಯೆಯಲ್ಲಿದ್ದ ಹುಸೇನ್, ಮಗನಿಗಾಗಿ ಅತ್ತಿದ್ದರು ಮತ್ತು ಸಾಯುವ ಮೊದಲು ಮಗನನ್ನು ನೋಡುತ್ತೇನೆ ಎಂಬ ಭರವಸೆಯಲ್ಲೇ ಇದ್ದರು ಎಂದಿದ್ದಾರೆ ಅನಾಸ್.
ಕಾಶ್ಮೀರ್ ಸಿಂಗ್‌ನನ್ನು (ಇತ್ತೀಚೆಗಷ್ಟೇ ಪಾಕಿಸ್ತಾನೀ ಜೈಲಿನಿಂದ ಬಿಡುಗಡೆಯಾಗಿ ಮರಳಿದ್ದ ಭಾರತೀಯ) ಬಿಡುಗಡೆ ಮಾಡಬಹುದಾದರೆ, ಅದೇ ರೀತಿ ಯಾವುದೇ ತಪ್ಪು ಕೆಲಸಗಳನ್ನು ಮಾಡದಿರುವ ನನ್ನ ಮಗನನ್ನೇಕೆ ಬಿಡುಗಡೆ ಮಾಡಬಾರದು ಎಂದು ಪ್ರಶ್ನಿಸುವ ಅಂಜುಮ್, ಆತನನ್ನು ಬಿಡುಗಡೆಗೊಳಿಸುವುದು ಸಾಧ್ಯವಿಲ್ಲ ಎಂದಾದರೆ, ದಯವಿಟ್ಟು ನನ್ನನ್ನು ಭಾರತಕ್ಕೆ ಕಳುಹಿಸಿ. ನನ್ನ ಕೊನೆಯ ದಿನಗಳನ್ನಾದರೂ ಮಗನೊಂದಿಗೆ ಕಳೆಯುತ್ತೇನೆ ಎನ್ನುತ್ತಾಳೆ.
|