ದೇಶದ ಅತ್ಯಂತ ಹಿಂಸಾತ್ಮಕ ಆತ್ಮಹತ್ಯಾ ಬಾಂಬ್ ದಾಳಿಗಳ ಹೊಣೆ ಹೊತ್ತುಕೊಂಡಿರುವ ಅಫ್ಘಾನಿಸ್ತಾನ ಮೂಲದ ಉಗ್ರವಾದಿ ಸಂಘಟನೆ ತಾಲಿಬಾನ್ ಅನ್ನು ಪಾಕಿಸ್ತಾನವು ಸೋಮವಾರ ನಿಷೇಧಿಸಿದೆ. ಪರ್ವೇಜ್ ಮುಷರಫ್ ಅವರನ್ನು ರಾಷ್ಟ್ರಾಧ್ಯಕ್ಷ ಪದವಿಯಿಂದ ತೊಲಗುವಂತೆ ಮಾಡಿದ ಒಂದು ವಾರದಲ್ಲಿ ಕೈಗೊಂಡಿರುವ ಈ ನಿರ್ಧಾರವು, ಅಮೆರಿಕವನ್ನು ತೃಪ್ತಿಗೊಳಿಸುವುದಕ್ಕಾಗಿ ಎಂದು ಅಂದಾಜಿಸಲಾಗುತ್ತಿದೆ.
ಇತ್ತೀಚೆಗೆ ನೂರಾರು ಮಂದಿಯ ಸಾವಿಗೆ ಕಾರಣವಾದ ಮತ್ತು 2 ಲಕ್ಷ ಮಂದಿ ಮನೆ-ಮಠ ತೊರೆದು ಪಲಾಯನ ಮಾಡಬೇಕಾಗಿ ಬಂದ ಹಿಂಸಾಗ್ರಸ್ತ ಅಫ್ಘಾನ್ ಗಡಿಯಲ್ಲಿರುವ ಬಾಜುರ್ ಪ್ರದೇಶದಲ್ಲಿ ಕದನ ವಿರಾಮಕ್ಕೆ ತಾಲಿಬಾನ್ ಮನವಿಯನ್ನು ಪಾಕಿಸ್ತಾನ ಸರಕಾರ ತಿರಸ್ಕರಿಸಿದ 24 ಗಂಟೆಗಳೊಳಗೆ ಅದನ್ನು ನಿಷೇಧಿಸುವ ಆದೇಶವೂ ಹೊರಬಿದ್ದಿದೆ.
ಪರಮಾಣು ಸಶಕ್ತ ರಾಷ್ಟ್ರದಲ್ಲಿ ತಾಲಿಬಾನ್ ಉಗ್ರರು ಹಾನಿಯುಂಟು ಮಾಡುತ್ತಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆಂತರಿಕ ಸಚಿವಾಲಯ ಮುಖ್ಯಸ್ಥ ರಹಮಾನ್ ಮಲಿಕ್ ಘೋಷಿಸಿದರು.
ಮುಷರಫ್ ಪದತ್ಯಾಗ ಮಾಡುವಂತೆ ಒತ್ತಡ ಹೇರಿದ ಬಳಿಕ ಆಡಳಿತಾರೂಢ ಎರಡೂ ಮಿತ್ರ ಪಕ್ಷಗಳು ತಮ್ಮೊಳಗೆ ಕಚ್ಚಾಡುತ್ತಾ, ಪಾಕಿಸ್ತಾನ ಸರಕಾರ ಅಸ್ಥಿರತೆಗೆ ಸಿಲುಕಿದ್ದು, ಈ ಬೆಳವಣಿಗೆಗಳನ್ನು ಅಮೆರಿಕವು ಕಣ್ಣಿಟ್ಟು ಗಮನಿಸುತ್ತಿದೆ. ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಪಾಕಿಸ್ತಾನದಲ್ಲಿ ಸ್ಥಿರತೆ ಇರುವುದು ಮುಖ್ಯ ಎಂಬುದು ಅಮೆರಿಕ ಭಾವನೆ.
ಉಗ್ರಗಾಮಿಗಳೊಂದಿಗೆ ಮಾತುಕತೆ ನಡೆಸಲಾಗಿದ್ದರೂ, ಅವರು ಭದ್ರತಾ ಪಡೆಗಳ ಮೇಲೆ ದಾಳಿ, ಶಾಲೆಗಳಿಗೆ ಬೆಂಕಿ ಹಚ್ಚುವುದು ಮತ್ತು ಸಾರ್ವಜನಿಕ ಕಟ್ಟಡಗಳಿಗೆ ಹಾನಿಯುಂಟು ಮಾಡುತ್ತಲೇ ಇದ್ದಾರೆ. ಇಸ್ಲಾಮಾಬಾದ್ ಬಳಿ ಕಳೆದ ಗುರುವಾರ ಅವಳಿ ಆತ್ಮಹತ್ಯಾ ಬಾಂಬ್ ಸ್ಫೋಟ ಸಂಭವಿಸಿ 67 ಮಂದಿ ಸಾವನ್ನಪ್ಪಿದ ಘಟನೆಗೂ ತಾಲಿಬಾನ್ ಹೊಣೆ ಹೊತ್ತುಕೊಂಡಿದೆ. ಕಳೆದ ಅಕ್ಟೋಬರ್‌ನಲ್ಲಿ ನಡೆದ ಹಿಂಸಾತ್ಮಕ ದಾಳಿಯಲ್ಲಿ ಮಾಜಿ ಪ್ರಧಾನಿ ಬೇನಜೀರ್ ಭುಟ್ಟೋ ರ‌್ಯಾಲಿಯಲ್ಲಿ 150ಕ್ಕೂ ಹೆಚ್ಚು ಮಂದಿಯನ್ನು ಹತ್ಯೆ ಮಾಡಲಾಗಿತ್ತು ಮತ್ತು ಡಿ.27ರ ದಾಳಿಯಲ್ಲಿ ಬೇನಜೀರ್ ಅವರನ್ನೂ ಹತ್ಯೆಗೈಯಲಾಗಿತ್ತು.
|