ಪದಚ್ಯುತಗೊಂಡಿದ್ದ ನ್ಯಾಯಾಧೀಶರನ್ನು ಮರುನೇಮಿಸುವ ಕುರಿತು ಆಸಿಫ್ ಅಲಿ ಜರ್ದಾರಿ ಅವರ ಪಿಪಿಪಿ ನೇತೃತ್ವದ ಸಮ್ಮಿಶ್ರ ಸರಕಾರಕ್ಕೆ ನೀಡಿರುವ ಗಡುವು ಮುಕ್ತಾಯವಾದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ, ಮಾಜಿ ಪ್ರಧಾನಿ ನವಾಜ್ ಶರೀಫ್ ಅವರ ಪಕ್ಷವು ಸರಕಾರದಿಂದ ಹೊರಬಂದಿರುವುದರೊಂದಿಗೆ, ಪಾಕಿಸ್ತಾನ ಮತ್ತೆ ರಾಜಕೀಯ ಅಸ್ಥಿರತೆಯ ಸುಳಿಯಲ್ಲಿ ಸಿಲುಕಿತು.
ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಅಮಾನತುಗೊಳಿಸಿದ್ದ ನ್ಯಾಯಾಧೀಶರನ್ನು ಮರಳಿ ನೇಮಿಸದಿದ್ದರೆ, ಪ್ರಧಾನಿ ಯೂಸುಫ್ ರಜಾ ಗಿಲಾನಿ ನೇತೃತ್ವದ ಮೈತ್ರಿ ಸರಕಾರಕ್ಕೆ ನೀಡುತ್ತಿರುವ ಬೆಂಬಲ ಹಿಂತೆಗೆದುಕೊಳ್ಳುವುದಾಗಿ ಪಾಕಿಸ್ತಾನ ಮುಸ್ಲಿಂ ಲೀಗ್ (ಪಿಎಂಎಲ್) ನೀಡಿರುವ ಗಡುವು ಸೋಮವಾರಕ್ಕೆ ಕೊನೆಗೊಂಡಿತ್ತು
ಫೆಡರಲ್ ಮತ್ತು ಪ್ರಾಂತೀಯ ಸರಕಾರಗಳು ಹೊಸ ಅಧ್ಯಕ್ಷರನ್ನು ಸೆ.6ರಂದು ಆರಿಸಲಿವೆ ಎಂಬ ನಿರ್ಧಾರ ಹೊರಬಿದ್ದ ಬೆನ್ನಿಗೇ, ಅಮಾನತುಗೊಂಡ ನ್ಯಾಯಾಧೀಶರ ಮರುನೇಮಕಕ್ಕೆ ಸಮ್ಮಿಶ್ರ ಸರಕಾರದ ಎರಡನೇ ಅತಿದೊಡ್ಡ ಪಕ್ಷವಾದ ಪಿಎಂಎಲ್ ಅಧ್ಯಕ್ಷ, ಮಾಜಿ ಪ್ರಧಾನಿ ನವಾಜ್ ಶರೀಫ್ ಅವರು ಸೋಮವಾರದ ಗಡುವು ವಿಧಿಸಿದ್ದರು.
ಮುಷರಫ್ ಪದತ್ಯಾಗ ಮಾಡಿ ಒಂದು ವಾರವಾದರೂ ನ್ಯಾಯಾಧೀಶರ ಮರು ನೇಮಕವಾಗಿಲ್ಲ. ಜರ್ದಾರಿ ಅವರು ಒಪ್ಪಂದ ಮುರಿದಿದ್ದಾರೆ ಎಂದು ಶರೀಫ್ ಆರೋಪಿಸಿದ್ದು, ತಾವು ಪ್ರತಿಪಕ್ಷದಲ್ಲಿ ಕೂರಲು ಸಿದ್ಧ ಎಂದು ಹೇಳಿದ್ದಾರೆ.
ಈ ಮಧ್ಯೆ, ಸಮ್ಮಿಶ್ರ ಸರಕಾರದ ನೇತೃತ್ವ ವಹಿಸಿರುವ ಪಕ್ಷವಾದ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ನಾಯಕ, ಹತ್ಯೆಗೀಡಾದ ಮಾಜಿ ಪ್ರಧಾನಿ ಬೇನಜೀರ್ ಭುಟ್ಟೋ ಅವರ ಪತಿ ಆಸಿಫ್ ಅಲಿ ಜರ್ದಾರಿ ಅವರು ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುವುದಾಗಿ ಶನಿವಾರ ದೃಢಪಡಿಸಿದ್ದರು.
ಮಂಗಳವಾರ ಪಾಕ್ ಅಧ್ಯಕ್ಷ ಹುದ್ದೆಗೆ ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿದ್ದು, ನವಾಜ್ ಶರೀಫ್ ಅವರ ಪಕ್ಷವೂ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿ, ಜರ್ದಾರಿಗೆ ಸವಾಲೊಡ್ಡಲಿದ್ದು, ಮೂಲಗಳ ಪ್ರಕಾರ, ಪಾಕಿಸ್ತಾನ ಮುಸ್ಲಿಂ ಲೀಗ್‌ನಿಂದ ಸಯೀದ್ ಉಜ್-ಜಮಾನ್ ಸಿದ್ದಿಕಿ ಅವರು ಕಣಕ್ಕಿಳಿಯುವ ನಿರೀಕ್ಷೆಯಿದೆ.
|