ಪಿಪಿಪಿ ಪಕ್ಷವು ವಚನಭ್ರಷ್ಟ ಎಂದು ಆರೋಪಿಸುವ ಮೂಲಕ ಸಮ್ಮಿಶ್ರ ಸರಕಾರದಿಂದ ಹೊರನಡೆದಿದ್ದ ಪಿಎಂಎಲ್-ಎನ್ ಪಕ್ಷದ ಮುಖ್ಯಸ್ಥ ನವಾಜ್ ಶರೀಫ್ ಅವರಲ್ಲಿ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಮುಖ್ಯಸ್ಥ ಆಸಿಫ್ ಅಲಿ ಜರ್ದಾರಿ ಕ್ಷಮೆ ಯಾಚಿಸಿದ್ದು, ದೇಶದ ಮತ್ತು ಪ್ರಜಾಪ್ರಭುತ್ವದ ಹಿತಕ್ಕಾಗಿ ಸರಕಾರಕ್ಕೆ ಮರುಸೇರ್ಪಡೆಗೊಳ್ಳುವಂತೆ ಮನವಿ ಮಾಡಿದ್ದಾರೆ.
"ಪ್ರಜಾಪ್ರಭುತ್ವದ ಹಾದಿಯಲ್ಲಿ ವಿಫಲಗೊಂಡಿದ್ದೇವೆ. ನನ್ನ ಮೃತ ಪತ್ನಿ ಬೇನಜೀರ್ ಭುಟ್ಟೋ ಮತ್ತು ನವಾಜ್ ಶರೀಫ್ ಅವರೊಂದಿಗೆ ಇದನ್ನು ಪ್ರಾರಂಭಿಸಿದ್ದೆವು. ಸ್ವಲ್ಪ ಪ್ರಮಾಣದ ಯಶಸ್ಸನ್ನೂ ಗಳಿಸಿದ್ದೆವು. ಇದರೊಂದಿಗೆ ಪ್ರಧಾನಮಂತ್ರಿಯ ಆಯ್ಕೆ ಮಾಡಿ ಸರ್ವಾಧಿಕಾರವನ್ನು ಸೋಲಿಸಿದ್ದೆವು" ಎಂಬುದಾಗಿ, ಜರ್ದಾರಿ ಅವರು ನವಾಜ್ ಶರೀಫ್ ರಾಜೀನಾಮೆ ನೀಡಿದ ನಂತರ, ಸರಕಾರಿ ಸ್ವಾಮ್ಯದ ಮಾಧ್ಯಮವೊಂದರಲ್ಲಿ ಈ ಸಂದೇಶವನ್ನು ನೀಡಿದ್ದಾರೆ.
ಈ ಪ್ರಜಾಪ್ರಭುತ್ವದ ಹಾದಿಯಲ್ಲಿ ನಮ್ಮೊಂದಿಗೆ ಪ್ರಯಾಣಿಸಲು ಶರೀಫ್ ನಿರಾಕರಿಸಿರುವುದು ದುರದೃಷ್ಟಕರವಾಗಿದೆ ಎಂಬುದಾಗಿ ಜರ್ದಾರಿ ಸಂದೇಶದಲ್ಲಿ ಹೇಳಿದ್ದಾರೆ.
ಶರೀಫ್ ಅವರ ನಿರ್ಧಾರವು ತನಗೆ ನೋವುಂಟು ಮಾಡಿದೆ ಎಂದಿರುವ ಜರ್ದಾರಿ, ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ತೊರೆದು ಪಾಕಿಸ್ತಾನ ಮತ್ತು ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಸಮ್ಮಿಶ್ರ ಸರಕಾರದಲ್ಲಿ ಮತ್ತೆ ಸೇರ್ಪಡೆಗೊಳ್ಳುವಂತೆ ಜರ್ದಾರಿ ಕೋರಿದ್ದಾರೆ.
|