ದುಬೈಯ ದೇಯಿರಾ ಪ್ರದೇಶದಲ್ಲಿ ಕಟ್ಟಡವೊಂದು ಬೆಂಕಿಗಾಹುತಿಯಾದ ಪರಿಣಾಮವಾಗಿ ಏಳು ಭಾರತೀಯ ನೌಕರರು ಸಾವನ್ನಪ್ಪಿದ್ದು, ಕೆಲವು ಮಂದಿ ಕಾಣೆಯಾಗಿದ್ದಾರೆ. ಮೃತಪಟ್ಟ ಏಳು ಮಂದಿಯನ್ನು ಹೈದರಾಬಾದ್ ಮೂಲದವರೆಂದು ಕಂಡುಕೊಳ್ಳಲಾಗಿದೆ.
ಮಂಗಳವಾರ ಮುಂಜಾನೆಯೇ ಬೆಂಕಿ ಕಾಣಿಸಿಕೊಂಡಿದ್ದರೂ, ಸಂಜೆಯತನಕ ಹಾನಿ ವರದಿಗಳು ತಿಳಿದುಬಂದಿರಲಿಲ್ಲ. ನಾಲ್ಕು ನೌಕರರು ಕಾಣೆಯಾದ ವರದಿಯಾಗಿದ್ದು, ಶೋಧ ಕಾರ್ಯವನ್ನು ನಡೆಸಲಾಗುತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಬೆಂಕಿ ಕಾಣಿಸಿಕೊಂಡ ನಂತರ, ಕಟ್ಟಡದ ಛಾವಣಿಯು ಧ್ವಂಸಗೊಂಡ ಪರಿಣಾಮವಾಗಿ ಹೆಚ್ಚಿನ ಮಂದಿ ಸಾವನ್ನಪ್ಪಿದ್ದಾರೆ ಎಂದು ದುಬೈ ಪೊಲೀಸರನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ಹೇಳಿವೆ.
ಬೆಂಕಿ ಅನಾಹುತವು ಸಣ್ಣ ಪ್ರಮಾಣದ್ದಾಗಿದ್ದರೂ, ಕಟ್ಟಡ ಹಳೆಯದಾಗಿದ್ದರಿಂದ ಮತ್ತು ಛಾವಣಿ ಮುರಿದು ಬಿದ್ದಿದರಿಂದ ಮಲಗಿದ್ದ ನೌಕರರು ಮೃತಪಟ್ಟಿದ್ದಾರೆ ಎಂದು ದುಬೈ ಪೊಲೀಸರು ಹೇಳಿದ್ದಾರೆ.
ಇದೇ ವೇಳೆ, ಬಲಿಪಶುಗಳಿಗೆ ಗರಿಷ್ಠ ಸಹಾಯ ನೀಡುವ ಭರವಸೆಯನ್ನು ದುಬೈಯ ಭಾರತದ ರಾಯಭಾರಿ ಜನರಲ್ ವೇಣು ರಾಜಮೋನಿ ನೀಡಿದ್ದಾರೆ.
|