"ಪ್ರಾರಂಭದಲ್ಲಿ ಪ್ರತಿಸ್ಪರ್ಧಿಗಳಾಗಿದ್ದರೂ, ತಾನು ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಡೆಮಕ್ರೆಟಿಕ್ ಪಕ್ಷದ ಅಭ್ಯರ್ಥಿ ಬರಾಕ್ ಒಬಾಮಾ ಅವರನ್ನು ಬೆಂಬಲಿಸುತ್ತೇನೆ ಮತ್ತು ಒಬಾಮಾ ಅವರು ತಾನು ಬೆಂಬಲಿಸುವ ಅಧ್ಯಕ್ಷೀಯ ಅಭ್ಯರ್ಥಿ" ಎಂದು ಹಿಲರಿ ಕ್ಲಿಂಟನ್ ತನ್ನ ಒಬಾಮಾ ಪರ ಪ್ರಚಾರದ ಭಾಷಣದಲ್ಲಿ ಹೇಳಿದ್ದಾರೆ.
ಪ್ರಾರಂಭದಲ್ಲಿ ನೀವು ನನಗೆ ಮತ ಚಲಾಯಿಸಿರಬಹುದು ಅಥವಾ ಒಬಾಮಾ ಅವರಿಗೆ ಮತ ನೀಡಿರಬಹುದು. ಈಗ ಏಕ ಉದ್ದೇಶಕ್ಕಾಗಿ ಇಬ್ಬರೂ ಒಂದಾಗಿದ್ದೇವೆ ಎಂದು ಡೆಮಕ್ರೆಟಿಕ್ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ಕ್ಲಿಂಟನ್ ನುಡಿದರು.
ಇದು ಭವಿಷ್ಯದ ಹೋರಾಟವಾಗಿದ್ದು, ನಾವೆಲ್ಲರೂ ಇದರಲ್ಲಿ ವಿಜಯಿಗಳಾಗಬೇಕು. ಬರಾಕ್ ಒಬಾಮಾ ತನ್ನ ಅಭ್ಯರ್ಥಿಯಾಗಿದ್ದು, ಮುಂದಿನ ಅಮೆರಿಕ ಅಧ್ಯಕ್ಷ ಸ್ಥಾನವನ್ನು ಒಬಾಮಾ ಅವರೇ ಪಡೆದುಕೊಳ್ಳಬೇಕು ಎಂದು ನೆರೆದಿದ್ದ ಅಸಂಖ್ಯಾತ ಜನಸಮೂಹದ ಎದುರು ಕ್ಲಿಂಟನ್ ಘೋಷಿಸಿದರು.
ರಿಪಬ್ಲಿಕನ್ ಪಕ್ಷದ ನಾಯಕರ ವೈಫಲ್ಯದ ಆಡಳಿತದಿಂದ ಕಳೆದ 35 ವರ್ಷಗಳಲ್ಲಿ ಅನೇಕ ಬಿರುಕುಗಳು ಉಂಟಾಗಿದ್ದು, ಮತ್ತೊಮ್ಮೆ ರಿಪಬ್ಲಿಕನ್ ಪಕ್ಷ ಅಥವಾ ಮೆಕ್‌ಕೈನ್ ಅಧ್ಯಕ್ಷರಾಗಲು ಸಾಧ್ಯವೇ ಇಲ್ಲ ಎಂದು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜಾನ್ ಮೆಕ್‌ಕೈನ್ ಅವರನ್ನು ಪ್ರಸ್ತಾಪಿಸಿ ಹೇಳಿದರು.
|